ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಗಾಳಿ ವಿದ್ಯುತ್ ಕಂಬ ಸ್ಥಾಪಿಸುವ ಕಂಪನಿಗಳು ಜಮೀನು ವಿಚಾರದಲ್ಲಿ ರೈತರಿಗೆ ಮೋಸ ಮಾಡುತ್ತಿದ್ದು, ಕಂಪನಿಗಳಿಗೆ ಲಗಾಮು ಹಾಕಲು ಜಿಲ್ಲಾಡಳಿತ ಹಾಗೂ ಸರಕಾರ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಡಾ. ಪಂ. ಪುಟ್ಟರಾಜ ರೈತ ಸಂಘದ ಅಧ್ಯಕ್ಷ ಎಂ.ಪಿ. ಮುಳಗುಂದ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗಾಳಿ ವಿದ್ಯುತ್ ಕಂಬ ಹಾಕಲು ಅನುಮತಿ ನೀಡುವ ರೈತರ ಬಳಿ ಒಂದು ಎಕರೆ ಖರೀದಿಸಿ, ಸುತ್ತಲಿನ ಐದು ಎಕರೆಯನ್ನು ಲೀಸ್‌ಗೆ ಪಡೆಯುತ್ತಿದ್ದಾರೆ. ಆದರೆ, ಈಚೆಗೆ ರೈತರ ಗಮನಕ್ಕೂ ತಾರದೇ ಖರೀದ ಮಾಡಿಕೊಂಡ ಒಂದು ಎಕರೆಯೂ ಸೇರಿ ಲೀಸ್‌ಗೆ ಪಡೆದ ಐದು ಎಕರೆಯನ್ನೂ ‘ಭೂ ಪರಿವರ್ತನೆ’ ಮಾಡಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.
ಕೆಲವೆಡೆ ಒಂದು ಕಂಬ ಹಾಕಲು ಐದಾರು ಎಕರೆ ಭೂಮಿಯನ್ನು ಖರೀದಿಸುತ್ತಿದ್ದು, ಇದರ ಹಿಂದೆ ಏಜೆಂಟರು ಹಾಗೂ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. ಹೀಗಾಗಿ ಜಿಲ್ಲಾಡಳಿತ ಮಧ್ಯಪ್ರವೇಶಿಸಿ, ಕಂಪನಿಗಳಿಗೆ ಕಟ್ಟುನಿಟ್ಟಾದ ನಿರ್ದೇಶನ ನೀಡಬೇಕು. ಇಲ್ಲದಿದ್ದಲ್ಲಿ, ಭವಿಷ್ಯದಲ್ಲಿ ರೈತರ ಫಲವತ್ತಾದ ಭೂಮಿ ಹಾಳಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಲೀಸ್ ಕೊಟ್ಟ ಮೇಲೆ ಗಾಳಿ ವಿದ್ಯುತ್ ಕಂಬದ ಕಾಮಗಾರಿ ಮುಗಿದ ಬಳಿಕ ಉಳಿದ ಜಮೀನಿನಲ್ಲಿ ರೈತ ಬೆಳೆ ಬೆಳೆಯಬಹುದಾದರೂ ಒಂದು ವೇಳೆ ಪ್ರಕೃತಿ ವಿಕೋಪ ಅಥವಾ ಅನಾವೃಷ್ಟಿಗೆ ತುತ್ತಾದಾಗ ಬೆಳೆ ವಿಮೆ ವ್ಯಾಪ್ತಿಗೂ ಅದು ಒಳಪಡುವುದಿಲ್ಲ ಎನ್ನಲಾಗಿದೆ. ಕೂಡಲೇ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಮತ್ತು ರೈತರ ಹಿತ ಕಾಪಾಡಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಶಂಭುನಾಥ ಅಂಗಡಿ, ಚನ್ನಪ್ಪ ಬಣಪ್ಪನವರ, ರಘುನಾಥರಡ್ಡಿ ಹುಚ್ಚಣ್ಣವರ, ಮಂಜುನಾಥ ಗುಡದೂರ, ಫಕ್ಕೀರಯ್ಯ ಕಣವಿ, ಸುಭಾಷರಡ್ಡಿ ಭೂಮಕ್ಕನವರ, ಕವಿತಾ ಗುಡದೂರ, ಕವಿತಾ ಮಬನೂರಕರ ಮುಂತಾದವರು ಇದ್ದರು.
ಗಾಳಿ ವಿದ್ಯುತ್ ತಯಾರಿಕಾ ಕಂಬ ಹಾಕಲು ಅನುಮತಿಸುವ ರೈತರ ಬಳಿ ಮಾಡಿಕೊಳ್ಳುವ ಒಪ್ಪಂದವು ಆಂಗ್ಲ ಭಾಷೆಯಲ್ಲಿ ಇದ್ದು, ಅದರ ಬದಲು ಕನ್ನಡದಲ್ಲಿ ಇರುವಂತೆ ಜಿಲ್ಲಾಡಳಿತ ತಾಕೀತು ಮಾಡಬೇಕು. ಇದರಿಂದ ರೈತರು ಕನಿಷ್ಠ ಷರತ್ತುಗಳನ್ನು ಓದಲು ಸಾಧ್ಯವಾಗಿ ಅದರ ನೈಜತೆ ಅರ್ಥವಾಗಲಿದೆ.
–ಎಂ.ಪಿ. ಮುಳಗುಂದ.
ಡಾ.ಪಂ.ಪುಟ್ಟರಾಜ ರೈತ ಸಂಘದ ಅಧ್ಯಕ್ಷರು.