ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಬಗರ್‌ಹುಕುಂ ರೈತರ ಹೋರಾಟ 16ನೇ ದಿನವೂ ಮುಂದುವರೆದಿದ್ದು, ರೈತರ ಬೇಡಿಕೆಗಳನ್ನು ಈಡೇರಿಸದ ಸರ್ಕಾರದ ನೀತಿಯನ್ನು ಖಂಡಿಸಿ ಬುಧವಾರ 12 ಗಂಟೆಯಿಂದ ಜಿಲಾಧಿಕಾರಿಗಳ ಕಛೇರಿ ಎದುರು ಅರೆಬೆತ್ತಲೆ ಹೋರಾಟಕ್ಕೆ ಬಗರ್‌ಹುಕುಂ ರೈತರು ನಿರ್ಧರಿಸಿದ್ದಾರೆ.
ಹಂತಹಂತವಾಗಿ ರೈತರು ತಮ್ಮ ಹೋರಾಟದ ರೂಪುರೇಷೆಯನ್ನು ಬದಲಾಯಿಸುತ್ತಿದ್ದು, ದಯಾಮರಣಕ್ಕೆ ಇನ್ನೆರಡು ದಿನದಲ್ಲಿ ರೈತರು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡುವ ನಿರ್ಧಾರವನ್ನು ಮಾಡಿದ ಬೆನ್ನಲ್ಲೇ ಮಂಗಳವಾರ ರೈತರೆಲ್ಲ ಸೇರಿ ಜಿಲ್ಲಾಡಳಿತ ಭವನದೆದುರು ಅರೆಬೆತ್ತಲೆ ಹೋರಾಟವನ್ನು ಮಾಡಿ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಲು ತಿರ್ಮಾನಿಸಿದ್ದಾರೆ.
ಜಿಲ್ಲೆಯ ಬಗರ್‌ಹುಕುಂ ಮತ್ತು ಅರಣ್ಯ ಭೂಮಿ ಅವಲಂಬಿತ ರೈತರು ಹಾಗೂ ನಾಗಾವಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕಾಗಿ ತಮ್ಮ ಜಮೀನುಗಳನ್ನು ಕಳೆದುಕೊಂಡಿರುವುದರಿಂದ, ಸರ್ಕಾರದಿಂದ ಹಕ್ಕು ಪತ್ರ ಮತ್ತು ಪರಿಹಾರ ದೊರೆಯಬೇಕೆಂದು ಆಗಸ್ಟ್ 19ರಿಂದ ಹೋರಾಟ ನಡೆಯುತ್ತಿದ್ದು, ಈ ಹಿಂದೆ 2023ರಲ್ಲಿ ಇದೇ ರೀತಿಯ ಅಹೋರಾತ್ರಿ ಧರಣಿ ನಡೆದಾಗ ಸಚಿವ ಎಚ್.ಕೆ. ಪಾಟೀಲರು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಸಚಿವರು ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳಿಗೆ ಹಾಜರಾಗಿ ಧರಣಿನಿರತ ಮಾರ್ಗದಲ್ಲಿ ಹೋದರೂ ಪ್ರತಿಭಟನಾಕಾರರನ್ನು ಭೇಟಿಯಾಗದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಪೂರ್ತಿ ಸ್ವಯಂ ಸೇವಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ರೂಪಾ ನಾಯ್ಕ ಮಾತನಾಡಿ, ಸುಮಾರೂ 25 ವರ್ಷಗಳಿಂದ ನಮ್ಮ ಸಂಸ್ಥೆ ಅರಣ್ಯ ಭೂಮಿ ಹಕ್ಕುಪತ್ರಕ್ಕಾಗಿ ಹೋರಾಟ ಮಾಡಿ ದಾವಣಗೆರೆ ಜಿಲ್ಲೆಯಲ್ಲಿ ಅನೇಕ ರೈತರಿಗೆ ಹಕ್ಕು ಪತ್ರಗಳನ್ನು ಒದಗಿಸಿಕೊಟ್ಟಿದ್ದೇವೆ. ಧರಣಿ ನಿರತರ ಬೇಡಿಕೆಗಳು ನ್ಯಾಯಯುತವಾಗಿದ್ದು, ಜಿಲ್ಲಾಡಳಿತ ರೈತರ ಬೇಡಿಕೆಗಳನ್ನು ಇಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸತತ 15 ದಿನಗಳಿಂದ ಈ ಹೋರಾಟ ನಡೆಯುತ್ತಿದ್ದರೂ ಸಚಿವರು ರೈತರ ಅಹವಾಲು ಆಲಿಸಿಲ್ಲ. ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರು ಕೂಡಲೇ ರೈತರ ಬೇಡಿಕೆಗಳಿಗೆ ಸ್ಪಂದಿಸುವ ವಿಶ್ವಾಸವಿದೆ ಎಂದು ಹೇಳಿದರು.
ಪ್ರತಿಭಟನಾ ಸ್ಥಳದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಬಿ.ಎಸ್. ಚಿಂಚಲಿ, ಎನ್.ಟಿ. ಪೂಜಾರ, ಚಂಬಣ್ಣ ಚನ್ನಪಟ್ಟಣ, ನಾಮದೇವ, ನಿಂಗಪ್ಪ, ಚನ್ನಪ್ಪ ಭಗತ್, ಫಿರೋಜ್ ನದಾಫ್, ಎಮ್. ಶಲವಡಿ ಸೇರಿದಂತೆ ಜಿಲ್ಲೆಯ ಅನೇಕ ರೈತರು, ಮಹಿಳೆಯರು ಹಾಗೂ ಹೋರಾಟಗಾರರು ಉಪಸ್ಥಿತರಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಸತತ 15 ದಿನಗಳಿಂದ ಈ ಹೋರಾಟ ನಡೆಯುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ರೈತ ವಿರೋಧಿ ಧೋರಣೆ ಖಂಡನೀಯ. ನ್ಯಾಯಸಮ್ಮತ ಬೇಡಿಕೆಗಳಿಗೆ ಜಿಲ್ಲಾಡಳಿತ ತಕ್ಷಣ ಸ್ಪಂದಿಸಬೇಕು. ನಮ್ಮ ಹೋರಾಟ ತೀವ್ರ ಸ್ವರೂಪ ಪಡೆಯುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು.
– ರವಿಕಾಂತ ಅಂಗಡಿ.
ಉತ್ತರ ಕರ್ನಾಟಕ ಮಹಾಸಭಾ ರಾಜ್ಯಾಧ್ಯಕ್ಷರು.



