ವಿಜಯಸಾಕ್ಷಿ ಸುದ್ದಿ, ಮುಳಗುಂದ : ಪಟ್ಟಣದ ಮುಳಗುಂದ-ಹೊಸೂರ ಮಾರ್ಗ ಮಧ್ಯದಲ್ಲಿ ಜಮೀನಿಗೆ ತೆರಳುವ ಸಂಪರ್ಕ ರಸ್ತೆ ಇಲ್ಲದೇ ಹಳ್ಳದಲ್ಲೇ ಸಂಚರಿಸುತ್ತ ನಿತ್ಯ ಪರದಾಡುವಂತಾಗಿದೆ.
ರೈತರು ದೇಶದ ಬೆನ್ನೆಲುಬು ಎನ್ನುವುದು ಬಿಟ್ಟರೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಗತಿಸಿದರೂ ರೈತರ ಜಮಿನುಗಳಿಗೆ ತೆರಳಲು ಇದುವರೆಗೂ ಸಮರ್ಪಕವಾದ ರಸ್ತೆ ನಿರ್ಮಿಸದೇ ರೈತರನ್ನು ನರಕಯಾತನೆಯಲ್ಲೇ ಬದುಕು ಕಳೆಯುವಂತೆ ಮಾಡುತ್ತಿರುವುದು ಖೇದಕರ ಸಂಗತಿ ಎಂದು ರೈತ ಮಂಜುನಾಥ ಲಾಳಿ ಬೇಸರ ವ್ಯಕ್ತಪಡಿಸಿದರು.
ತಮ್ಮ ಜಮೀನಿಗೆ ತೆರಳಲು ಈ ಹಳ್ಳದ ರಸ್ತೆ ಮೂಲವಾಗಿದ್ದು, ಕಳೆದ ವರ್ಷ ಈ ಹಳ್ಳಕ್ಕೆ ಕೃಷಿ ಇಲಾಖೆಯಿಂದ ಚೆಕ್‌ಡ್ಯಾಮ್ ನಿರ್ಮಿಸಿರುವುದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಈ ರಸ್ತೆ ದುರಸ್ತಿ ಮಾಡಿ ರೈತರಿಗೆ ಅನೂಕುಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಚೆಕ್‌ಡ್ಯಾಮ್ ನಿರ್ಮಾಣದಿಂದ ನೀರು ಜೋರಾಗಿ ಹರಿದು ಬರುವುದರಿಂದ ದೊಡ್ಡ ದೊಡ್ಡ ಕಂದಕಗಳು ನಿರ್ಮಾಣವಾಗಿದ್ದು, ಜಮಿನುಗಳಿಗೆ ತೆರಳಲು ಅನಾನುಕೂಲವಾಗುತ್ತಿದೆ. ಕೂಡಲೇ ಅಧಿಕಾರಿಗಳು ರೈತರ ಜಮೀನುಗಳ ರಸ್ತೆಯನ್ನು ದುರಸ್ತಿ ಮಾಡಿ ಎಂದು ಬಸವರಾಜ ಲಾಳಿ ಆಗ್ರಹಿಸಿದ್ದಾರೆ.