ವಕ್ಫ್ ಹೆಸರು ಕಡಿಮೆಗೊಳಿಸಲು ರೈತರ ಆಗ್ರಹ

0
Farmers' demand to reduce name of waqf
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ರಾಜ್ಯದ ಅನೇಕ ಕಡೆ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಾದ ಬಗ್ಗೆ ದೊಡ್ಡ ಅವಾಂತರವೇ ಸೃಷ್ಟಿಯಾಗಿದ್ದು, ಈ ಬಗ್ಗೆ ಲಕ್ಷ್ಮೇಶ್ವರ ತಾಲೂಕಿನ ಅನೇಕ ರೈತರು ಸಹ ಹಲವು ವರ್ಷದಿಂದ ಈ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಬುಧವಾರ ತಹಸೀಲ್ದಾರ ಕಚೇರಿಯೆದುರು ತಮ್ಮ ಅಸಮಾಧಾನ ವ್ಯಕ್ತಪಡಿಸಿ, ತಲೆಮಾರುಗಳಿಂದ ನಮ್ಮ ಹೆಸರಿನಲ್ಲಿರುವ ಕೃಷಿ ಭೂಮಿಯ ದಾಖಲೆಯಲ್ಲಿ ನಮೂದಾದ ವಕ್ಫ್ ಮಂಡಳಿ ಹೆಸರು ತೆಗೆದುಹಾಕುವಂತೆ ರೈತರು ತಹಸೀಲ್ದಾರ ವಾಸುದೇವ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಮಾತನಾಡಿದ ರೈತ ಶಿವಣ್ಣ ಕಟಗಿ, ನಮ್ಮ ಹೆಸರಿನ ಪಹಣಿಯಲ್ಲೂ ವಕ್ಫ್ ಆಸ್ತಿಯ ಕರಿ ನೆರಳು ಬಿದ್ದಿರುವುದು ನಮ್ಮನ್ನು ಚಿಂತೆಗೀಡು ಮಾಡಿದೆ. 2019ರವರೆಗೆ ಆಸ್ತಿಯಲ್ಲಿ ಕೇವಲ ನಮ್ಮ ಹೆಸರು ಮಾತ್ರ ಇದ್ದು, ಇದೀಗ ಪಹಣಿಯಲ್ಲಿ ವಕ್ಫ್ ಮಂಡಳಿ ಹೆಸರು ದಾಖಲಾಗಿದೆ. ಇದರಿಂದ ರೈತರಿಗೆ ಬೆಳೆವಿಮೆ, ಬೆಳೆಹಾನಿ, ಬೆಳೆಸಾಲ ಸೇರಿದಂತೆ ಯಾವುದೇ ಸರಕಾರ ಯೋಜನೆಗಳು ಸಿಗದೇ ವಂಚಿತರಾಗಿದ್ದೇವೆ. ಆಸ್ತಿಯಲ್ಲಿನ ಹೆಸರು ಬದಲಾವಣೆ ಮಾಡಿಕೊಳ್ಳಲು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ ಹೋರಾಟ ಮಾಡುತ್ತಿದ್ದೇವೆ.

ಈ ಸಮಸ್ಯೆ ಬಗೆಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗುತ್ತಿಲ್ಲ. 15 ದಿನದೊಳಗೆ ಆಸ್ತಿ ಮೇಲಿರುವ ವಕ್ಫ್ ಮಂಡಳಿ ಹೆಸರು ಕಡಿಮೆಯಾಗದಿದ್ದಲ್ಲಿ ಸಾವಿರಾರು ರೈತರೊಂದಿಗೆ ತಹಸೀಲ್ದಾರ ಕಚೇರಿ ಎದುರಿನಲ್ಲಿ ಸತ್ಯಾಗ್ರಹ ಪ್ರಾರಂಭಿಸುವದಾಗಿ ಎಚ್ಚರಿಕೆ ನೀಡಿದರು.

ಲಕ್ಷ್ಮೇಶ್ವರ, ಶಿಗ್ಲಿ, ಗೊಜನೂರ, ಗೋನಾಳ, ಯಳವತತಿ, ಬಡ್ನಿ, ಸಂಕದಾಳ, ಸೂರಣಗಿ, ಬಟ್ಟೂರ, ಮಾಡಳ್ಳಿ ಸೇರಿ 40ಕ್ಕೂ ಹೆಚ್ಚು ಆಸ್ತಿಗಳ ನೂರಾರು ಎಕರೆ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಸಂದರ್ಭದಲ್ಲಿ ಬಸವರಾಜ ಗೋಡಿ, ಪ್ರಕಾಶ ಹುಬ್ಬಳ್ಳಿ, ದ್ಯಾಮಣ್ಣ, ಎಸ್.ಎಚ್. ಪೂಜಾರ, ನಾಗಪ್ಪ ಪಾಣಿಗಟ್ಟಿ, ಶಿವನಗೌಡ್ರ ಅಡರಕಟ್ಟಿ, ವಿ.ಎಸ್. ಬೆಲ್ಲದ, ನಾಗಪ್ಪ ಓಂಕಾರಿ, ಭರಮಣ್ಣ ರೊಟ್ಟಿಗವಾಡ ಮುಂತಾದವರಿದ್ದರು.

ಮನವಿ ಸ್ವೀಕರಿಸಿದ ತಹಸೀಲ್ದಾರ ವಾಸುದೇವ ಸ್ವಾಮಿ, ರೈತರು ಮತ್ತು ವಕ್ಫ್ ಬೋರ್ಡ್ನವರೊಂದಿಗೆ ದಾಖಲೆ ಪಡೆದು ಸಮಕ್ಷಮ ವಿಚಾರಣೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣ ಖುಲಾಸೆಯಾಗಿರುವವರ ಖಾತೆಗಳಲ್ಲಿ ಬದಲಾವಣೆಗಳಾಗಿವೆ. ಉಳಿದೆಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here