ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ತಾಲೂಕಿನ ಹಿರೇಮಲ್ಲಾಪೂರ ಗ್ರಾಮದಲ್ಲಿ ಸಿದ್ಧವಾಗಿರುವ ಎಥೆನಾಲ್ ಕಾರ್ಖಾನೆ ಪ್ರಾರಂಭಿಸುವವರೆಗೂ ಅಹೋರಾತ್ರಿ ಹೋರಾಟ ಪ್ರಾರಂಭಿಸುವುದಕ್ಕೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ತಹಸೀಲ್ದಾರರಿಗೆ ಮನವಿ ಅರ್ಪಿಸಿದರು.
ತಹಸೀಲ್ದಾರ ಧನಂಜಯ ಎಂ ಅವರು, ಬೆಳಗಾವಿಯಲ್ಲಿ ಅಧಿವೇಶನ ನಡೆದಿದ್ದು, ಅಧಿಕಾರಿಗಳು ಅದರಲ್ಲಿರುವುದರಿಂದ ಹೋರಾಟವನ್ನು ಒಂದು ವಾರ ಮುಂದೂಡುವಂತೆ ಮನವಿ ಮಾಡಿದರು. ಆದರೆ ರೈತರು ಇದಕ್ಕೆ ಒಪ್ಪದೆ ಹೋರಾಟಕ್ಕೆ ಸಿದ್ಧರಾಗಿಯೇ ಬಂದಿದ್ದೇವೆ, ಕಾಲಾವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಕೊನೆಗೆ ತಹಸೀಲ್ದಾರರು ರೈತರ ಮನವೊಲಿಸಿ ಧರಣಿ ಸತ್ಯಾಗ್ರಹ ಮುಂದೂಡುವಲ್ಲಿ ಯಶಸ್ವಿಯಾದರು. ಆಗ ರೈತರು ಡಿ. 20ರೊಳಗಾಗಿ ಎಥೆನಾಲ್ ಕಂಪನಿ ಪ್ರಾರಂಭವಾಗದಿದ್ದಲ್ಲಿ ಅಹೋರಾತ್ರಿ ಪ್ರತಿಭಟನೆಗೆ ಅವಕಾಶ ನೀಡಬೇಕೆಂದು ಮನವಿ ಅರ್ಪಿಸಿದರು.
ಈ ವೇಳೆ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಶಂಕರಗೌಡ ಜಯನಗೌಡ್ರು, ಸುರೇಶ ಸಿಂದಗಿ ಮಾತನಾಡಿ, ಎಥೆನಾಲ್ ಫ್ಯಾಕ್ಟರಿ ಪ್ರಾರಂಭದಿಂದ ನಮ್ಮ ಭಾಗದಲ್ಲಿ ಮೆಕ್ಕೆಜೋಳ, ಕಬ್ಬು, ಜೋಳ ಬೆಳೆಯುವ ರೈತರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿ ಉತ್ತಮ ಬೆಲೆ ಸಿಗುತ್ತದೆ. ಆದ್ದರಿಂದ ಲಕ್ಷ್ಮೇಶ್ವರ ತಾಲೂಕಿನಲ್ಲಿ ಪ್ರಾರಂಭಗೊಳ್ಳುತ್ತಿರುವ ಎಥೆನಾಲ್ ಫ್ಯಾಕ್ಟರಿ ಆರಂಭಕ್ಕೆ ಸರ್ಕಾರ ಯಾವುದೇ ಅಡಚಣೆ ಮಾಡಬಾರದು. ಈ ಫ್ಯಾಕ್ಟರಿ ಪ್ರಾರಂಭವಾಗುವುದರಿಂದ ಸಾಕಷ್ಟು ಅನುಕೂಲತೆಗಳಾಗುತ್ತವೆ. ಆದರೆ ಇದಕ್ಕೆ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದು ವಿಷಾದದ ಸಂಗತಿಯಾಗಿದ್ದು, ಕೂಡಲೇ ಫ್ಯಾಕ್ಟರಿಯನ್ನು ಪ್ರಾರಂಭಿಸಲು ಆಗ್ರಹಿಸುತ್ತೇವೆ. ಇದೇ ತಿಂಗಳ 20ರೊಳಗಾಗಿ ಎಥೆನಾಲ್ ಕಂಪನಿ ಕಾರ್ಯಾರಂಭ ಮಾಡಬೇಕು. ಇಲ್ಲದಿದ್ದಲ್ಲಿ ನೂರಾರು ರೈತರು ಕುಟುಂಬ ಸಮೇತರಾಗಿ ಅಹೋರಾತ್ರಿ ಧರಣಿ ಕೈಗೊಳ್ಳುತ್ತೇವೆ. ಅದಕ್ಕೆ ನಮಗೆ ಸೂಕ್ತ ರಕ್ಷಣೆ ನೀಡಬೇಕೆಂದು ಹೇಳಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ ಧನಂಜಯ ಎಂ, ಈ ಕುರಿತಂತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಟಾಕಪ್ಪ ಸಾತಪೂತೆ, ನಾಗರಾಜ ಕಳ್ಳಿಹಾಳ, ಆದೇಶ ಹುಲಗೂರ, ಲಕ್ಷ್ಮವ್ವ ಮೆಳ್ಳಿಗಟ್ಟಿ, ಶರಣಪ್ಪ ಕಮ್ಮಾರ, ವಿರೂಪಾಕ್ಷಪ್ಪ ಅರಳಿ ಸೇರಿದಂತೆ ಅನೇಕ ರೈತರು, ಮಹಿಳೆಯರು ಹಾಜರಿದ್ದರು.
ರವಿವಾರ ಪತ್ರಿಕಾಗೋಷ್ಠಿ ನಡೆಸಿ ಡಿ. 15ರಿಂದ ಸೋಮವಾರ ಅಹೋರಾತ್ರಿ ಧರಣಿ ನಡೆಸುವ ಎಚ್ಚರಿಕೆ ನೀಡಿದ್ದ ಸಂಘಟನೆಗಳು, ಸೋಮವಾರ ತಹಸೀಲ್ದಾರ ಕಚೇರಿಗೆ ನೂರಾರು ಜನರೊಂದಿಗೆ ಧರಣಿ ಸತ್ಯಾಗ್ರಹಕ್ಕೆ ಸಿದ್ಧವಾಗಿಯೇ ಬಂದಿದ್ದರು. ಅಲ್ಲದೆ ಸೂಕ್ತ ರಕ್ಷಣೆ ನೀಡಬೇಕೆಂದು ತಹಸೀಲ್ದಾರರಿಗೆ ತಿಳಿಸಿ ಹೋರಾಟ ಪ್ರಾರಂಭಿಸುವುದಾಗಿ ತಿಳಿಸಿದರು.



