ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಯೂರಿಯಾ ಗೊಬ್ಬರ ಅಭಾವ ಸೃಷ್ಟಿಯಾಗಿದ್ದು, ರೈತರು ಯೂರಿಯಾ ಗೊಬ್ಬರಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಮೂರು ಖಾಸಗಿ ರಸಗೊಬ್ಬರ ಮಾರಾಟ ಮಳಿಗೆ, ಶ್ರಮಜೀವಿ ರೈತ ಉತ್ಪಾದನಾ ಕೇಂದ್ರ ಹಾಗೂ ಟಿಎಪಿಸಿಎಂಎಸ್ ಕೇಂದ್ರಗಳಲ್ಲಿ ಯೂರಿಯಾ ಮಾರಾಟ ಮಾಡಲಾಗುತ್ತಿದೆ. ಆದರೆ, ಯೂರಿಯಾ ಅಭಾವದ ಕಾರಣದಿಂದ ಪಟ್ಟಣದ ಎಫ್‌ಪಿಒ ಮತ್ತು ಟಿಎಪಿಸಿಎಂಎಸ್‌ನಲ್ಲಿ ಮಾತ್ರ ಯೂರಿಯಾ ಲಭ್ಯವಿದ್ದು, ಅದು ಕೂಡ ಕ್ಷಣ ಮಾತ್ರದಲ್ಲಿ ಖಾಲಿಯಾಗುತ್ತಿದೆ.
ಪ್ರತಿಯೊಬ್ಬ ರೈತರಿಗೆ ಎರಡು ಚೀಲ ಮಾತ್ರ ಯೂರಿಯಾ ವಿತರಿಸಲಾಗುತ್ತಿದೆ. ಹತ್ತಾರು ಎಕರೆ ಗೋವಿನಜೋಳ, ಶೇಂಗಾ ಸೇರಿದಂತೆ ಇತರೆ ಬೆಳೆ ಬೆಳೆಯಲಾಗಿದ್ದು, ಅತಿಯಾದ ಮಳೆಯಿಂದ ಬೆಳೆಗಳು ಹಾಳಾಗುತ್ತಿವೆ. ಅವುಗಳನ್ನು ರಕ್ಷಿಸಿಕೊಳ್ಳಲು ಯೂರಿಯಾ ಅತ್ಯಗತ್ಯವಾಗಿದ್ದು, ಯೂರಿಯಾ ಗೊಬ್ಬರ ಸಿಗದ ಕಾರಣ ರೈತರು ಕಂಗಾಲಾಗಿದ್ದಾರೆ.
ಪಟ್ಟಣದ ಟಿಎಪಿಸಿಎಂಎಸ್ ಕೇಂದ್ರದಲ್ಲಿ ಸೋಮವಾರ 250 ಚೀಲ ಹಾಗೂ ಮಂಗಳವಾರ 550 ಚೀಲ ಯೂರಿಯಾ ಮಾರಾಟವಾಗಿದ್ದು, ಸರತಿ ಸಾಲಿನಲ್ಲಿ ನಿಂತು ಗೊಬ್ಬರ ಸಿಗದೆ ರೈತರು ಬೇಸರದಿಂದ ಮನೆಕಡೆಗೆ ಹೋದ ದೃಶ್ಯ ಕಂಡು ಬಂದಿತು.
ಎಲ್ಲಿಯೂ ಯೂರಿಯಾ ಗೊಬ್ಬರ ಲಭ್ಯವಾಗುತ್ತಿಲ್ಲ. ಲಭ್ಯವಿರುವ ಕಡೆಗಳಲ್ಲಿ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ. ಆದ್ದರಿಂದ, ಎಲ್ಲ ಕಡೆಗಳಲ್ಲಿ ಯೂರಿಯಾ ಗೊಬ್ಬರ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಶೋಕ ಬೇವಿನಕಟ್ಟಿ ಮತ್ತಿತರ ರೈತರು ಆಗ್ರಹಿಸಿದ್ದಾರೆ.