ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸ್ಕೂಲ್ ಚಂದನದಲ್ಲಿ ಶನಿವಾರ ನಡೆದ ಭಾರತರತ್ನ ಪ್ರೊ. ಸಿ.ಎನ್. ರಾವ್ ಅವರ 10ನೇ ವರ್ಷದ ವಿಜ್ಞಾನ ವಿಸ್ತೃತ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಮಗ್ರ ರೈತಪರ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಸನ್ಮಾನಿಸಲಾಯಿತು.
ಮೆಕ್ಕೆಜೋಳವನ್ನು 2400 ರೂ ಬೆಂಬಲ ಬೆಲೆಯಡಿ ಖರೀದಿಗೆ ಆಗ್ರಹಿಸಿ ಸಮಗ್ರ ರೈತಪರ ಸಂಘಟನೆಗಳ ಒಕ್ಕೂಟದಿಂದ 18 ದಿನಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಿದ್ದರು. ಪರಿಣಾಮ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರ ಈ ಹೋರಾಟವನ್ನು ಪರಿಗಣಿಸಿ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಿದ್ದಲ್ಲದೇ 5 ಕ್ವಿಂಟಲ್ ಬದಲಾಗಿ ಪ್ರತಿ ರೈತರಿಂದ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ರಾಜ್ಯ ಸರಕಾರದ ಮೂಲಕ ಆದೇಶಿಸಿದ್ದರು. ಇದರಿಂದ ಸಂತುಷ್ಟರಾದ ರೈತ ಹೋರಾಟಗಾರರು ಸಿಎಂ ಸಿದ್ದರಾಮಯ್ಯನವರಿಗೆ ಜೋಡು ಎತ್ತಿನ ಚಕ್ಕಡಿ ಕಾಣಿಕೆ ನೀಡಿ ಗೌರವಿಸಿ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಇದಕ್ಕೆ ಕಾರಣೀಕರ್ತರಾದ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲರನ್ನು ಸನ್ಮಾನಿಸಿದರು.
ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ರಾಮಕೃಷ್ಣ, ಆನಂದ ಗಡ್ಡದೇವರಮಠ, ಸುಜಾತಾ ದೊಡ್ಡಮನಿ, ಎಸ್.ಪಿ. ಬಳಿಗಾರ, ರೈತ ಮುಖಂಡರಾದ ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ಎಂ.ಎಸ್. ದೊಡ್ಡಗೌಡ್ರ, ನೀಲಪ್ಪ ಶೇರಸೂರಿ, ದಾದಾಪೀರ ಮುಚ್ಚಾಲೆ, ಹೊನ್ನಪ್ಪ ವಡ್ಡರ, ಅಭಯ ಜೈನ ಸೇರಿ ಸಮಗ್ರ ರೈತಪರ ಸಂಘಟನೆಗಳ ಒಕ್ಕೂಟ ರೈತ ಮುಖಂಡರು ಇದ್ದರು.



