ವಿಜಯಸಾಕ್ಷಿ ಸುದ್ದಿ, ಧಾರವಾಡ: ಕಳೆದ ಮೂರು ದಿನಗಳಿಂದ ನವಲಗುಂದ ಪಟ್ಟಣದಲ್ಲಿ ಸರಕಾರದ ಬೆಂಬಲ ಬೆಲೆ ಯೋಜನೆಯಲ್ಲಿ ಮೆಕ್ಕೆಜೋಳ ಖರೀದಿಗೆ ಅಗ್ರಹಿಸಿ ರೈತರ ಧರಣಿ, ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳಕ್ಕೆ ಸೋಮವಾರ ಬೆಳಿಗ್ಗೆ ಶಾಸಕ ಎನ್.ಎಚ್. ಕೋನರಡ್ಡಿ ಹಾಗೂ ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು.
ಸರಕಾರದಿಂದ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಸಲು ಸರಕಾರ ಮಟ್ಟದಲ್ಲಿ ಚರ್ಚಿಸಿ, ಕ್ರಮವಹಿಸಲಾಗುತ್ತಿದೆ. ಸ್ವಲ್ಪ ದಿನಗಳ ಕಾಲಾವಕಾಶ ನೀಡಿ, ಉಪವಾಸ ಸತ್ಯಾಗ್ರಹ, ಧರಣಿ ಹಿಂಪಡೆಯುವಂತೆ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಮಾಡಿದ ಮನವಿ ಪರಿಗಣಿಸಿ, ರೈತರು ಸತ್ಯಾಗ್ರಹ ಅಂತ್ಯಗೊಳಿಸಿ, ಧರಣಿ ಹಿಂಪಡೆದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಸರಕಾರ ಮಟ್ಟದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯವರಿಗೆ ಗೋದಿನ ಜೋಳದ ಖರೀದಿ ಬಗ್ಗೆ ಮಾತನಾಡಿದ್ದೇನೆ. ಕೇಂದ್ರ ಸರಕಾರ ಅನುಮತಿ ಕೊಡಲಿ ಬಿಡಲಿ, ಗೋದಿನ ಜೋಳ ಖರೀದಿಗೆ ಸರಕಾರ ಬದ್ಧವಾಗಿದೆ. ತಾಂತ್ರಿಕ ಕಾರಣದಿಂದ ತಡವಾಗಿದೆ. ಸಚಿವರಾದ ಎಚ್.ಕೆ. ಪಾಟೀಲ ಹಾಗೂ ಚಲವರಾಯಸ್ವಾಮಿ ಅವರನ್ನು ದೆಹಲಿಗೆ ಕಳಿಸಿ, ಗೊಂದಲಗಳನ್ನು ಸರಿಪಡಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಶೀಘ್ರದಲ್ಲಿ ಖರೀದಿ ಕೇಂದ್ರ ಸ್ಥಾಪಿಸಲಾಗುವುದು ಎಂಬ ಭರವಸೆಯನ್ನು ನೀಡಿದರು.
ಶಾಸಕರು ಹಾಗೂ ಜಿಲ್ಲಾಧಿಕಾರಿ ಮನವಿಗೆ ಸ್ಪಂದಿಸಿ ರೈತ ಸೇನಾ ರಾಜ್ಯಾಧ್ಯಕ್ಷ ಶಂಕರ ಅಂಬಲಿ ಮಾತನಾಡಿ, ನಿಮ್ಮ ಮೇಲೆ ನಂಬಿಕೆ ಇಟ್ಟು ಕಾಲವಕಾಶ ನೀಡುತ್ತೇವೆ. ಭರವಸೆ ಹುಸಿಯಾದರೆ ಮತ್ತೆ ಹೋರಾಟ ಮಾಡುತ್ತೇವೆ ಎಂದರು.
ರೈತ ಮುಖಂಡರಾದ ಲೋಕನಾಥ ಹೆಬಸೂರು, ರಘುನಾಥ ನಡುವಿನಮನಿ, ರಾಮದುರ್ಗ ರೈತ ಹೋರಾಟಗಾರ ಶಂಕರಗೌಡ ಪಾಟೀಲ, ಆನಂದ ಹವಳಕೋಡ, ದೇವೆಂದ್ರಪ್ಪ ಹಳ್ಳದ, ಜೀವನ ಪವಾರ ಸೇರಿದಂತೆ ಇತರರು ಇದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಡಿಎಚ್‌ಓ ಡಾ. ಎಸ್.ಎಂ. ಹೊನಕೇರಿ, ತಹಸೀಲ್ದಾರ ಸುಧೀರ ಸಾಹುಕಾರ, ಸಿ.ಪಿ.ಐ ರವಿ ಕಪ್ಪತ್ತನವರ, ಡಾ. ರೂಪಾ ಮುಂತಾದವರು ಹಾಜರಿದ್ದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ರಾಜ್ಯ ಸರಕಾರದ ಕಾರ್ಯದರ್ಶಿ ಶಾಲಿನಿ ರಜನೀಶ ಹಾಗೂ ಸರಕಾರ ಮಟ್ಟದ ಅಧಿಕಾರಿಗಳು, ಸರಕಾರದಿಂದ ಮೆಕ್ಕೆಜೋಳ ಖರೀದಿಗೆ ಅಗತ್ಯವಿರುವ ಕ್ರಮ ಕೈಗೊಳ್ಳಲು ನಿರಂತರ ಪ್ರಯತ್ನ ಮಾಡುತ್ತಿದ್ದು, ಈ ವಿಷಯದ ಗಂಭೀರತೆಯ ಅರಿವಿದೆ. ರಾಜ್ಯದಲ್ಲಿ ಮೊದಲಿಗರಾಗಿ ಧಾರವಾಡ ಜಿಲ್ಲೆಯಲ್ಲಿ ಬೆಳೆ ಹಾನಿ ಸಮೀಕ್ಷೆ ಮಾಡಿ ನವಲಗುಂದ ತಾಲೂಕಿಗೆ ಪರಿಹಾರ ನೀಡಿದ್ದು, ಇನ್ನೊಂದು ಹಂತದಲ್ಲಿ ಪರಿಹಾರ ಸಿಗಲಿದೆ ಎಂದು ರೈತರಿಗೆ ತಿಳಿಸಿದರು.


