ಗದಗ: ಮೆಣಸಿನಕಾಯಿಗೆ ಬಂಪರ್ ಬೆಲೆ ಬಂದಿದ್ದೆ ತಡ ಕಳ್ಳರ ಕಾಟ ಜೋರಾಗಿದೆ. ಗದಗ ಜಿಲ್ಲೆಯಲ್ಲಿ ಇದೀಗ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆದ ರೈತರ ಸಂಕಷ್ಟ ಹೇಳತೀರದು.
ಇತ್ತೀಚೆಗೆ ಮುಂಡರಗಿ ತಾಲೂಕಿನ ಮೇವುಂಡಿ
ಗ್ರಾಮದಲ್ಲಿ ದೀಪಾವಳಿ ಅಮವಾಸ್ಯೆ ದಿನದಂದು ಈರುಳ್ಳಿ ಕಳ್ಳತನ ಪ್ರಕರಣ ನಡೆದಿತ್ತು. ಇದೀಗ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ಮೆಣಸಿನಕಾಯಿ ಕಳ್ಳತನ ಮಾಡಿದ್ದ ಇಬ್ಬರು ಖದೀಮರು ರೈತರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಅದೇ ಗ್ರಾಮದ ಶಿವು ಹಾಗೂ ಮಂಜುನಾಥ್ ಎಂಬುವರು ಮೆಣಸಿನಕಾಯಿ ಕಳ್ಳತನ ಮಾಡುವಾಗ ರೆಡ್‌ಹ್ಯಾಂಡ್ ಸಿಕ್ಕಿಬಿದ್ದಿದ್ದಾರೆ. ಸಿಕ್ಕಿ ಬಿದ್ದ ಇಬ್ಬರನ್ನು ಗ್ರಾಮದಲ್ಲಿ ಮೆಣಸಿನಕಾಯಿ ಗಂಟನ್ನು ತಲೆ ಮೇಲೆ ಹೊರಸಿ ಊರ ತುಂಬ ಮೆರವಣಿಗೆ ಮಾಡಲಾಗಿದೆ. ಮೆರವಣಿಗೆ, ಥಳಿತದ ವಿಡಿಯೋ ವೈರಲ್ ಆಗಿದೆ.
ನಂತರ ದೇವಸ್ಥಾನವೊಂದರ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಅಷ್ಟೇ ಅಲ್ಲದೇ ಒಬ್ಬನ ಮೇಲೆ ಮತ್ತೊಬ್ಬನನ್ನು ನಿಲ್ಲಿಸಿ ಮುಂದೆ ಈ ರೀತಿ ಕಳ್ಳತನ ಕೃತ್ಯಕ್ಕೆ ಕೈ ಹಾಕದಂತೆ ಪಾಠ ಕಲಿಸಿ ಕೈ ಬಿಟ್ಟಿದ್ದಾರೆ. ಆ ಮೂಲಕ ರೈತರು ಕಳ್ಳ-ಕಾಕರಿಗೆ ಇಂಥದೊಂದು ಸಂದೇಶ ರವಾನಿಸಿದ್ದಾರೆ.