ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ನೂರಾರು ರೈತರ ಸಾವಿರಾರು ಎಕರೆ ಜಮೀನುಗಳಿಗೆ ಹೋಗುವ ಲಕ್ಷ್ಮೇಶ್ವರ-ಯಳವತ್ತಿ ರಸ್ತೆ ಸಂಪೂರ್ಣ ಹಾಳಾಗಿ ತಮ್ಮ ಜಮೀನುಗಳಿಗೆ ಹೋಗಲಾರದ ಸ್ಥಿತಿ ನಿರ್ಮಾಣವಾಗಿದ್ದು, ದಿಕ್ಕು ತೋಚದಂತಾಗಿ ಆಕ್ರೋಶಗೊಂಡ ಅನೇಕ ರೈತರು ಭಾನುವಾರ ಸರಕಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಅತ್ಯಂತ ಕಡಿದಾದ ರಸ್ತೆ, ರಸ್ತೆಯುದ್ದಕ್ಕೂ ಮುಳ್ಳುಕಂಟಿಗಳು, ರಸ್ತೆ ಮಧ್ಯೆ ವಿದ್ಯುತ್ ಕಂಬಗಳು, ರಸ್ತೆಗೆ ಅಡ್ಡಲಾಗಿ ಹಾಕಿರುವ ಕಿರು ಸೇತುವೆ ಪೈಪ್‌ಗಳು ಕಿತ್ತು ಅಲ್ಲಲ್ಲಿ ಕೊರಕಲುಂಟಾಗಿವೆ. ಮಳೆಯಿಂದಾಗಿ ರಸ್ತೆ ಸಂಪೂರ್ಣ ಕೆಸರಿನಿಂದ ಕೂಡಿ ಕಳೆದ 1 ತಿಂಗಳಿಂದ ಈ ರಸ್ತೆಯಲ್ಲಿ ಎತ್ತು-ಚಕ್ಕಡಿ, ಟ್ರ್ಯಾಕ್ಟರ್, ಬೈಕ್ ಹೋಗದಂತಾಗಿವೆ. ರವಿವಾರ ತೀರಾ ಅನಿವಾರ್ಯ ಸಂದರ್ಭದಲ್ಲಿ ಈ ರಸ್ತೆಯಲ್ಲಿ ಚಕ್ಕಡಿ ಹೋಗಲಾಗದೇ ರಸ್ತೆ ಪಕ್ಕದ ಗುಂಡಿಗೆ ಬಿದ್ದಿದ್ದನ್ನು ಗಮನಿಸಿ ರೈತರು ಧಾವಿಸಿ ರಕ್ಷಣೆ ಮಾಡಿದ್ದರಿಂದ ಎತ್ತು ಮತ್ತು ರೈತ ಅಪಾಯದಿಂದ ಪಾರಾಗಿದ್ದಾರೆ. ಈ ವೇಳೆ ಸೇರಿದ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿ ವರ್ಷದುದ್ದಕ್ಕೂ ಈ ಭಾಗದ ರೈತರು ಕಷ್ಟ ಅನುಭವಿಸುವುದು ತಪ್ಪುತ್ತಿಲ್ಲ. ಕಳೆದ ವರ್ಷ ಇದೇ ದಾರಿಯಲ್ಲಿ ಟ್ರ್ಯಾಕ್ಟರ್ ಬಿದ್ದು ಗೊಜನೂರಿನ ರೈತ ಯುವಕನೋರ್ವ ಮೃತಪಟ್ಟಿದ್ದಾನೆ.
ಪದೇ ಪದೇ ಅನಾಹುತಗಳು ಸಂಭವಿಸುತ್ತಲೇ ಇದ್ದು ಮಳೆಗಾಲದಲ್ಲಂತೂ ರೈತರ ಪರಿಸ್ಥಿತಿ ಹೇಳತೀರದಾಗಿದೆ. ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡಲಾಗುತ್ತಿಲ್ಲ. ಬೆಳೆಗಿಂತ ಕಳೆಯೇ ಹೆಚ್ಚಾಗಿದ್ದು ಅನೇಕ ರೈತರ ಜಮೀನುಗಳು ಪಾಳು ಬಿದ್ದಿವೆ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಕೇಳಿದರೆ ಜಾರಿಕೊಳ್ಳುತ್ತಿದ್ದಾರೆ.
15/20 ದಿನಗಳಲ್ಲಿ ಹೆಸರು, ಶೇಂಗಾ ಫಸಲು ಕಟಾವಿಗೆ ಬರುತ್ತವೆ. ಆದ್ದರಿಂದ ಸ್ಥಳೀಯ ಶಾಸಕರು, ಸಂಸದರು, ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ರೈತರು ಆಗ್ರಹಿಸಿದರು.
ಈ ವೇಳೆ ರೈತ ಮುಖಂಡರಾದ ಡಿ.ಬಿ. ಬಳಿಗಾರ, ಸುಭಾನ ಹೊಂಬಾಳ, ಮಹಾದೇವಪ್ಪ ಅಂದಲಗಿ, ನಿಂಗಪ್ಪ ಮುಳಗುಂದ, ಸಂತೋಷ ಕಾಶೆಟ್ಟಿ, ರಾಮಣ್ಣ ಮುಳಗುಂದ, ಹನೀಫಸಾಬ್ ಸೂರಣಗಿ, ಪಕ್ಕಿರಪ್ಪ ಉಮಚಗಿ, ಮಹಾದೇವಪ್ಪ ಉಮಚಗಿ, ಮಲ್ಲಪ್ಪ ಉಮಚಗಿ, ಶೇಕಪ್ಪ, ಶಿವನಗೌಡ ಪಾಣಿಗಟ್ಟಿ, ಪ್ರಶಾಂತ ಉಮಚಗಿ, ರಬ್ಬನಿಸಾಬ್ ಸೂರಣಗಿ, ನಜೀರಾ ಸೂರಣಗಿ, ರಾಜು ಉಮಚಗಿ ಸೇರಿ ಅನೇಕ ರೈತರಿದ್ದರು
ಕಳೆದ ವರ್ಷ ಬರಗಾಲದಿಂದ ಕಷ್ಟದಲ್ಲಿರುವ ರೈತರು ಈ ವರ್ಷ ಕಷ್ಟಪಟ್ಟು ಬಿತ್ತನೆ ಮಾಡಿದ್ದಾರೆ. ರಸ್ತೆ ಪರಿಸ್ಥಿತಿ ಅಯೋಮಯವಾಗಿದ್ದರಿಂದ ಕಳೆ ತೆಗೆಯಲು, ಯಡೆ ಹೊಡೆಯಲು, ಕ್ರಿಮಿನಾಶ ಸಿಂಪಡಿಸಲು ಸೇರಿ ಕೃಷಿ ಚಟುವಟಿಕೆಗಳಿಗೆ ತೆರಳಲಾಗದೇ ಬೆಳೆಗಳು ಹಾಳಾಗುತ್ತಿವೆ. ರಾಮಣ್ಣ ಲಮಾಣಿ ಶಾಸಕರಾಗಿದ್ದ ವೇಳೆ ಈ ರಸ್ತೆಯನ್ನು ಒಂದಷ್ಟು ದುರಸ್ಥಿಗೊಳಿಸಲಾಗಿತ್ತು. ತಾಲೂಕಿನಲ್ಲಿನ ಬಹುತೇಕ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿದ್ದು, ಈ ಭಾಗದ ಶಾಸಕರು, ಅಧಿಕಾರಿಗಳು ತಾತ್ಕಾಲಿಕ ರಸ್ತೆಯನ್ನಾದರೂ ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು.
– ಮಂಜುನಾಥ ಮಾಗಡಿ.
ರೈತ ಮುಖಂಡರು.