ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಳೆದ 15 ದಿನಗಳಿಂದ ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ಸಮಗ್ರ ರೈತ ಸಂಘಟನೆಗಳ ಒಕ್ಕೂಟ ಮತ್ತು ಅನೇಕ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ವೇದಿಕೆಯಿಂದ ಶನಿವಾರ ಹಾಳಾಗುತ್ತಿರುವ ಗೋವಿನಜೋಳದ ತೆನೆಗಳನ್ನು ರಸ್ತೆಗೆ ಚೆಲ್ಲಿ ರೈತರು ಸರಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಮಗ್ರ ರೈತ ಸಂಘಟನೆಗಳ ಒಕ್ಕೂಟದ ಮಂಜುನಾಥ ಮಾಗಡಿ, ರೈತರು ಬೆಳೆದ ಗೋವಿನಜೋಳ ಹಾಳಾಗುತ್ತಿದ್ದು, ರೈತರ ಸಹನೆ ಮಿತಿ ಮೀರುತ್ತಿದೆ. ಕಷ್ಟದಲ್ಲಿರುವ ರೈತರು ತಮ್ಮ ಬದುಕಿನ ಬಂಡಿ ಸಾಗಿಸಲು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಖರೀದಿ ಕೇಂದ್ರ ಆರಂಭವಾಗದಿದ್ದರೆ ಎತ್ತು-ಚಕ್ಕಡಿಯೊಂದಿಗೆ ರಾಜ್ಯ ಹೆದ್ದಾರಿ ಬಂದ್ ಮಾಡಿ ದೊಡ್ಡಮಟ್ಟದ ಹೋರಾಟಕ್ಕಿಳಿಯುತ್ತೇವೆ. ರೈತರ ಹೋರಾಟ ತೀವ್ರ ಸ್ವರೂಪ ಪಡೆದು ಸರ್ಕಾರಕ್ಕೆ ಬಿಸಿ ಮುಟ್ಟಿದ ಸಂದರ್ಭದಲ್ಲಿ ನ. 21ರಂದು ಸರ್ಕಾರ ಗೋವಿನಜೋಳ ಖರೀದಿ ಕೇಂದ್ರ ಪ್ರಾರಂಭಿಸುವ ಭರವಸೆ ನೀಡಿತ್ತು. 8 ದಿನ ಕಳೆದರೂ ಖರೀದಿ ಕೇಂದ್ರ ಪ್ರಾರಂಭಿಸಿಲ್ಲ. ರೈತರ ಸಹನೆಯ ಕಟ್ಟೆ ಒಡೆಯುವ ಮೊದಲೇ ಎಚ್ಚೆತ್ತುಕೊಳ್ಳಬೇಕು ಎಂದರು.
ಆದ್ರಳ್ಳಿಯ ಶ್ರೀ ಕುಮಾರ ಮಹಾರಾಜರು ಮತ್ತೆ ಉಪವಾಸ ಮುಂದುವರೆಸಿರುವುದು ಮತ್ತು ರೈತರ ಹೋರಾಟ ತೀವ್ರಗೊಳಿಸುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಧರಣಿ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ದುರಗೇಶ ರುದ್ರಾಕ್ಷಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ತಹಸೀಲ್ದಾರ ಧನಂಜಯ ಎಂ ಅವರು ಫೆಡರೇಶನ್ ಮೂಲಕ ಖರೀದಿ ಕೇಂದ್ರ ಪ್ರಾರಂಭಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆ ಪ್ರಾರಂಭವಾಗಿದೆ. ಅದಕ್ಕಾಗಿಯೇ ಜಿಲ್ಲಾಧಿಕಾರಿಗಳು ಬೆಂಗಳೂರಿಗೆ ಹೋಗಿದ್ದಾರೆ. ಅವರ ನಿರ್ದೇಶನದಂತೆ ಮಂಗಳವಾರ/ಬುಧವಾರದೊಳಗೆ ಲಕ್ಷ್ಮೇಶ್ವರದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಲಾಗುವುದು. ರೈತರು ತಾಳ್ಮೆ, ಸಹನೆಯಿಂದ ಇರಬೇಕು ಮತ್ತು ಉಪವಾಸ ಕೈಬಿಡಿ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪವಾಸ ನಿರತ ಆದ್ರಳ್ಳಿ ಶ್ರೀಗಳು, ಸರ್ಕಾರ ಈಗಾಗಲೇ ರೈತ ಹೋರಾಟಗಾರರ ನಂಬಿಕೆ-ವಿಶ್ವಾಸ ಕಳೆದುಕೊಂಡಿದೆ. ಕಳೆದ 15 ದಿನಗಳಿಂದ ರೈತರು ನಮ್ಮನ್ನು ನಾವು ದಂಡಿಸಿಕೊಳ್ಳಿದು ಯಾರಿಗೂ ತೊಂದರೆಯಾಗದೆ ಸಮಾಧಾನದಿಂದ ಹೋರಾಟ ಮಾಡಿದ್ದೇವೆ. ಅಧಿಕಾರಿಗಳು ನಿಮ್ಮ ಕೆಲಸ ನೀವು ಮಾಡಿದ್ದೀರಿ. ಸೋಮವಾರದಿಂದ ಹೋರಾಟದ ಸ್ವರೂಪ ತೀವ್ರಗೊಳಿಸುತ್ತೇವೆ. ನಾನಂತೂ ಇಂದಿಂದ ಮತ್ತೆ ಹನಿ ನೀರೂ ಕುಡಿಯುವುದಿಲ್ಲ, ರೈತರಿಗಾಗಿ ಆತ್ಮಸಂತೋಷದಿಂದ ಪ್ರಾಣಬಿಡಲೂ ಸಿದ್ಧ. ಅದೇ ವೀರಸ್ವರ್ಗ ಎಂದುಕೊಳ್ಳುತ್ತೇನೆ. ನೀವು ಮತ್ತೆ ಬರುವುದಾದರೆ ಆದೇಶ ಪ್ರತಿಯೊಂದಿಗೆ ಬನ್ನಿ ಎಂದರು.
ಕಳೆದ 13 ದಿನಗಳಿಂದಲೂ ನಿತ್ಯ ಸರದಿ ಉಪವಾಸ ವ್ರತ ಕೈಗೊಂಡಿರುವ ಪೂರ್ಣಾಜಿ ಖರಾಟೆ, ಜ್ಞಾನೋಬಾ ಬೋಮಲೆ, ಹೋರಾಟದ ನೇತೃತ್ವ ವಹಿಸಿರುವ ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ಸೋಮಣ್ಣ ಡಾಣಗಲ್, ಮುಂಡರಗಿ ಕಿಸಾನ ಜಾಗೃತಿ ವಿಕಾಸ ಸಂಘದ ತಾಲೂಕಾಧ್ಯಕ್ಷ ಈರಣ್ಣ ಗಟ್ಟಿ, ಮಂಜುನಾಥ ಉಪ್ಪಾರ, ಮಲ್ಲಯ್ಯ ಗೊಂಡಬಾಳಮಠ, ಜಗದೀಶಗೌಡ ಪಾಟೀಲ, ಡಾ. ಎಸ್.ಕೆ. ಪೊಲೀಸ್‌ಪಾಟೀಲ, ಅಶೋಕ ಪಾಟೀಲ, ಅರುಣ ಲಕ್ಕಣ್ಣವರ, ಪ್ರದೀಪ ಹುಣಸಿಮರದ, ಗಂಗಪ್ಪ ಕಾಳೆ, ಮಹೇಶ ಗೊಜಗೊಜಿ, ಮುತ್ತುಪೂಜಾರ, ಬೀರಪ್ಪ ಕೆರೂರ, ಮಾಂತೇಶ ಗಂಜಿಗಟ್ಟಿ, ಫಕ್ಕಿರೇಶ ಯಲಿವಾಳ ಸೇರಿ ನೂರಾರು ರೈತರು ಪಾಲ್ಗೊಂಡಿದ್ದರು. ರಾಮಗಿರಿ ಗ್ರಾಮದ ರೈತರು ಹೋರಾಟಗಾರರಿಗೆ ಬುತ್ತಿ ಕಟ್ಟಿಕೊಂಡು ಎತ್ತು-ಚಕ್ಕಡಿಯೊಂದಿಗೆ ಆಗಮಿಸಿದ್ದರು. ಪಟ್ಟಣದ ವಕ್ಫ್ ಆಸ್ತಿಗಳಲ್ಲಿನ ಬಾಡಿಗೆದಾರರ ಸಂಘದ ಸದಸ್ಯರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಕಿಸಾನ ಜಾಗೃತಿ ವಿಕಾಸ ಸಂಘದ ಜಿಲ್ಲಾಧ್ಯಕ್ಷ ನಿಂಗಪ್ಪ ಭಂಡಾರಿ, ಮುಂಡರಗಿ ಘಟಕದ ವಿಶ್ವನಾಥ ತಾಮ್ರಗುಂಡಿ ಮಾತನಾಡಿ, ಸರಕಾರದ ಗದ್ದುಗೆ ಗುದ್ದಾಟದಲ್ಲಿ ರೈತರ ಕಷ್ಟಕ್ಕೆ ಸ್ಪಂದಿಸುವ ಮನಸ್ಥಿತಿಯಲ್ಲಿಲ್ಲ. ಪಕ್ಷಕ್ಕಾಗಿ ದುಡಿದಿದ್ದೇವೆ ಕೂಲಿ ಕೊಡಿ ಎಂದು ಕೇಳುವ ಇವರಿಗೆ ರೈತರು ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆಗೆ ಯೋಗ್ಯ ಬೆಲೆ ಕೊಡಿಸುವ ಕಾಳಜಿ ಇಲ್ಲ. ರಾಜ್ಯ ಸರ್ಕಾರ ಕಿವುಡು, ಮೂಕ ಹಾಗೂ ಕಣ್ಣಿದ್ದು ಕುರುಡರಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.



