ವಿಜಯಸಾಕ್ಷಿ ಸುದ್ದಿ, ಗದಗ : ಕಡಲೆ ಖರೀದಿ ವಿಚಾರದಲ್ಲಿ ರೈತರಿಗೆ ಮೋಸವಾಗಿದೆ. ಕಡಲೆ ಖರೀದಿಸಿ, ರೈತರಿಗೆ ಅದರ ಬಾಕಿ ಹಣ 6.50 ಕೋಟಿ ರೂ ಕೊಡದೇ ಸತಾಯಿಸುತ್ತಿರುವವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮವಹಿಸಬೇಕು. ಬಾಕಿ ಉಳಿಸಿಕೊಂಡಿರುವ ಹಣವನ್ನು ಕೂಡಲೇ ರೈತರಿಗೆ ಕೊಡಿಸಬೇಕು. ಇಲ್ಲವಾದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಮುಂಡರಗಿ ಹಾಗೂ ಗದಗ ತಾಲೂಕಿನ ರೈತರು ಜಿಲ್ಲಾಡಳಿತ ಭವನದ ಎದುರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ನಗರದ ಚನ್ನಮ್ಮ ವೃತ್ತದ ಬಳಿ ಸೇರಿದ್ದರು. ಅಲ್ಲಿಂದ ಜಿಲ್ಲಾಡಳಿತ ಭವನದವರೆಗೆ ಪಾದಯಾತ್ರೆ ನಡೆಸಿದರಲ್ಲದೆ, ಕೆಲ ಸಮಯ ರಸ್ತೆ ತಡೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಬಾಕಿ ಹಣ ಕೊಡಿಸುವಂತೆ ಆಗ್ರಹಿಸಿದ ರೈತ ಮಹಿಳೆಯರು ನೆಲದ ಮೇಲೆ ಕುಳಿತು ಬಾಯಿ ಬಡಿದುಕೊಂಡರೆ, ರೈತರು ಅರೆಬೆತ್ತಲೆಯಾಗಿ ಧಿಕ್ಕಾರ ಕೂಗಿದರು.
ಕಡಲೆ ಖರೀದಿಸಿದ ವ್ಯಕ್ತಿಯಿಂದ ಸಂಬಂಧಿಸಿದ ರೈತರಿಗೆ ಹಣ ಕೊಡಿಸಿ ರೈತರಿಗೆ ನ್ಯಾಯ ಒದಗಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಒಂದು ತಿಂಗಳ ಸಮಯಾವಕಾಶ ಕೇಳಿದ್ದಾರೆ. ಆನಂತರವೂ ವಿಳಂಬವಾದರೆ ಜಿ.ಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಎನ್‌ಆರ್‌ಎಲ್‌ಎಂ ಜಿ.ಪಂ ಕಾರ್ಯಕ್ರಮ ವ್ಯವಸ್ಥಾಪಕ ಚಂದ್ರಶೇಖರ ಎಲಿಗಾರ, ಆನಂದ ಬೆಳವಣಿಕಿ ಹಾಗೂ ತಾಲೂಕು ತಾಂತ್ರಿಕ ಸಂಯೋಜಕ ಜಗದೀಶ ಕಂಬಾಳಿಮಠ ಎಂಬುವವರು ದಾವಣಗೆರೆಯ ಮಾರುತಿ ಗೌಡ ಎಂಬುವನೊಂದಿಗೆ ಮಧ್ಯಸ್ಥಿಕೆ ವಹಿಸಿ 3,250 ಟನ್ ಕಡಲೆ ಖರೀದಿಸಿದ್ದಾರೆ. ಈ ಪೈಕಿ 13 ಕೋಟಿ ರೂ ಹಣವನ್ನು ಈಗಾಗಲೇ ಪಾವತಿಸಿದ್ದು, ಇನ್ನೂ 6.50 ಕೋಟಿ ರೂ ಹಣ ಬಾಕಿ ಉಳಿದಿದೆ. ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ರೈತರಿಗೆ ಹಣ ಕೊಡಿಸಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಅತಿಯಾದ ಮಳೆಯಿಂದ ಹೆಸರು, ಗೆಜ್ಜೆ ಶೇಂಗಾ ಬೆಳೆ ಹಾನಿಯಾಗಿದೆ. ಆದರೆ, ಬ್ಯಾಂಕಗಳಿಂದ ರೈತರು ಪಡೆದ ಬೆಳೆ ಸಾಲ ಮರುಪಾವತಿಸುವಂತೆ ಅಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ. ಸರ್ಕಾರದ ಯಾವುದೇ ಪರಿಹಾರ ಅಥವಾ ಇನ್ನಾವುದೋ ಹಣ ರೈತರ ಖಾತೆಗೆ ಜಮಾ ಆದರೂ, ಆ ಹಣವನ್ನು ತಡೆಹಿಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ಪ್ರತಿಭಟನೆಯಲ್ಲಿ ನಾರಾಯಣ ಬಿರಸಲ, ಎಸï.ಬಿ. ಮುಲ್ಲಾ, ಸೋಮನಾಥ ಎಸï.ಲಮಾಣಿ, ಲಕ್ಷ್ಮಿ ಹಿತ್ತಲಮನಿ, ಸರಸ್ವತಿ ದಾಸರ, ಸರಸ್ವತಿ ಬೆಟಗೇರಿ, ಶಿವಪ್ಪ ಮೂಲಿಮನಿ, ವೆಂಕಣ್ಣ ಮಲ್ಲರೆಡ್ಡಿ, ಸೋಮರಡ್ಡಿ ಹೊಸಮನಿ, ಪಂಚಾಕ್ಷರಯ್ಯ ಬೆಟಗೇರಿಮಠ, ಸಿದ್ದಪ್ಪ ಮುಳ್ಳೂರ, ಬಸವರಾಜ ಬಾಳಿಕಾಯಿ, ಮಂಜುನಾಥ ಗೋಡಿ, ವಾಯ.ಎನ. ಕೆಂಚನಗೌಡ್ರ, ಆನಂದ ಸಗರ ಸೇರಿದಂತೆ 450ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.
ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಸುಂಕದ, ಮಹಿಳಾ ಗುಂಪಿನ ಮೂಲಕ ರೈತರು ಕಡಲೆ ಖರೀದಿಗೆ ನೀಡಿದ್ದು, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರ ನಿರ್ದೇಶನದಂತೆ ಕಡಲೆ ಖರೀದಿ ನಡೆದಿದೆ. ಖರೀದಿಸಿದ ವ್ಯಕ್ತಿ 9 ತಿಂಗಳು ಕಳೆದರೂ ಹಣ ನೀಡುತ್ತಿಲ್ಲ. ಖರೀದಿ ವೇಳೆ ಎನ್‌ಆರ್‌ಎಲ್‌ಎಂ ಮನವಿಯ ಮೇರೆಗೆ ರೈತರನ್ನು ಪರಿಚಯಿಸಲು ಮಧ್ಯಸ್ಥಿಕೆ ವಹಿಸಿದ್ದ ಸ್ಥಳೀಯ ಮಹಿಳಾ ಸಂಘದ ಸದಸ್ಯರು ಇದರಿಂದ ಒತ್ತಡಕ್ಕೆ ಸಿಲುಕುವಂತಾಗಿದೆ ಎಂದರು.