ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗದಗ ಜಿಲ್ಲೆಯಲ್ಲಿ ಈರುಳ್ಳಿ ಮತ್ತು ಮೆಕ್ಕೆಜೋಳ ಬೆಲೆ ಪಾತಾಳಕ್ಕಿಳಿದಿದ್ದರಿಂದ ಬೇಸತ್ತಿದ್ದ ರೈತರು ಮಂಗಳವಾರ ಗದಗ–ಬಾಗಲಕೋಟೆ ರಾಜ್ಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿ, `ಬೆಂಬಲ ಬೆಲೆ ಘೋಷಣೆ ಮಾಡದೇ ಒಂದು ಹೆಜ್ಜೆ ಸಹ ಹಿಂದೆ ಸರಿಯುವುದಿಲ್ಲ’ ಎಂದು ಘೋಷಣೆಗಳನ್ನು ಕೂಗುತ್ತ ಹೋರಾಟ ಕೈಗೊಂಡರು.
ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ವೀರಯೋಧ ದಿ. ಬಸವರಾಜ ರಮಾಣಿಯವರ ಸ್ಮಾರಕ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಕೋಟುಮಚಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಮಂಗಳವಾರ ಬೆಳಗ್ಗೆಯಿಂದಲೇ ರಾಜ್ಯ ಹೆದ್ದಾರಿಯ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಿ, ರಸ್ತೆಯ ಮಧ್ಯೆ ಟ್ರಾಕ್ಟರ್, ಚಕ್ಕಡಿ, ಬೈಕ್, ಲಾರಿ ನಿಲ್ಲಿಸಿ ರಸ್ತೆಯಲ್ಲಿಯೇ ಪ್ರತಿಭಟನೆ ನಡೆಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾಜಗೌಡ ಸಂಕನಗೌಡ್ರ ಮಾತನಾಡಿ, ರೈತರ ಕೋಪಕ್ಕೆ ಕಾರಣ ಒಂದೇ, ಈರುಳ್ಳಿ ಮತ್ತು ಮೆಕ್ಕೆಜೋಳಕ್ಕೆ ತಕ್ಷಣವೇ ಬೆಂಬಲ ಬೆಲೆ ಘೋಷಿಸಬೇಕು. ಸಿಎಂ ಬದಲಾವಣೆ ಗೊಂದಲದಲ್ಲಿ ಸರ್ಕಾರ ಮುಳುಗಿದೆ, ರಾಜಕಾರಣಿಗಳು ದಿನವಿಡೀ ಮೋಜು-ಮಸ್ತಿ ಮಾಡುತ್ತಾರೆ. ಆದರೆ ಅನ್ನದಾತನ ಕಣ್ಣೀರು, ಹೊಟ್ಟೆ ಬಾಧೆ, ನಷ್ಟ ಇವೆಲ್ಲ ಯಾರಿಗೂ ಕಾಣುತ್ತಿಲ್ಲ ಎಂದು ಟೀಕಿಸಿ, ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ವಿರೋಧ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಮುತ್ತಣ್ಣಗೌಡ ಚೌರಡ್ಡಿ ಮಾತನಾಡಿ, ಬೆಂಬಲ ಬೆಲೆ ಘೋಷಣೆ ಆಗದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಚಳುವಳಿ ಅಬ್ಬರಿಸಲಿದೆ. ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ಹೋರಾಟ ಈಗಷ್ಟೇ ಶುರುವಾಗಿದೆ ಎಂದರು.
ಸ್ಥಳಕ್ಕೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳು ತಕ್ಷಣವೇ ಬರುವಂತೆ ರೈತರು ಒತ್ತಾಯಿಸಿದರಲ್ಲದೆ, ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಹಾಜರಾಗಲೇಬೇಕು ಎಂದು ಪಟ್ಟು ಹಿಡಿದರು.
ರಸ್ತೆ ತಡೆಯಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ಉಂಟಾಗಿದ್ದರೂ, ಅನ್ನದಾತರು ಸ್ಪಷ್ಟವಾಗಿ `ನಮ್ಮ ಬೇಡಿಕೆಗೆ ನ್ಯಾಯ ಸಿಕ್ಕರೆ ಮಾತ್ರ ಹೋರಾಟ ಮುಗಿಯಲಿದೆ’ ಎಂದು ಘೋಷಣೆ ಕೂಗಿದರು. ಗದಗದ ಮಣ್ಣಿನಲ್ಲಿ ರೈತರ ಕೋಪ ಈಗ ಜ್ವಾಲಾಮುಖಿಯಾಗಿದೆ.
ಪ್ರತಿಭಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ, ಗದಗ ತಹಸೀಲ್ದಾರರು ಭೇಟಿ ನೀಡಿ ರೈತ ಸಮಸ್ಯೆಯನ್ನು ಆಲಿಸಲು ಮುಂದಾಗಿದ್ದರು. ಆದರೆ, ಜಿಲ್ಲಾಧಿಕಾರಿ, ಸಚಿವರು ಸ್ಥಳಕ್ಕೆ ಬರುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಪ್ರತಿಭಟನಾನಿರತ ರೈತರು ಪಟ್ಟು ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಹಾದೇವಗೌಡ ಪಾಟೀಲ, ಈರಪ್ಪ ರಾಮಗೇರಿ, ಹುಚ್ಚೀರಪ್ಪ ಬಡಿಗೇರ, ಶ್ರೀಧರ ಕುಲಕರ್ಣಿ, ಬಸವಂತಪ್ಪ ಇಟಗಿ, ಗುರುಮೂರ್ತೆಪ್ಪ ಕುರುಡಗಿ, ಮಲ್ಲೇಶಪ್ಪ ಸೂಡಿ, ಸಂಗಣ್ಣ ದಂಡಿನ, ಶರಣಪ್ಪ ಕೊಪ್ಪದ, ಯಮನೂರಸಾಬ ಬಿಚ್ಚುಮನಿ, ಶಿವಯ್ಯ ಅಂಗಡಿ, ಜಗದೀಶ ಮಲ್ಲಣ್ಣವರ, ಪಾಲಾಕ್ಷಯ್ಯ ಬಳಿಗೇರಿಮಠ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
ಬಾಕ್ಸ್
ಅಂತಿಮವಾಗಿ ಉಪವಿಭಾಗಾಧಿಕಾರಿ ಗಂಗಪ್ಪ ಹಾಗೂ ಗದಗ ತಹಸೀಲ್ದಾರ ಶ್ರೀನಿವಾಸ ಕುಲಕರ್ಣಿ ರೈತರ ಮನವೊಲಿಸಲು ಯಶಸ್ವಿಯಾದರು. ರೈತರ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಕೂಡಲೇ ಪತ್ರ ಬರೆಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಬೆಂಬಲ ಬೆಲೆ ಘೋಷಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ ತರುವಾಯ ರೈತ ಸಂಘಗಳು ಹೋರಾಟವನ್ನು ಮೊಟಕುಗೊಳಿಸಿದರು.


