ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಂಘಗಳನ್ನು ರಚಿಸುವುದು ಸುಲಭ. ಆದರೆ ಅವುಗಳನ್ನು ಮುನ್ನಡೆಸಿಕೊಂಡು ಹೋಗುವುದು ತುಂಬಾ ಕಷ್ಟ. ಹೀಗಿರುವಾಗ, ಹಾಲಕೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಶತಮಾನ ಪೂರೈಸಿ 112ನೇ ವರ್ಷದತ್ತ ದಾಪುಗಾಲನ್ನಿಟ್ಟಿರುವುದು ಹೆಮ್ಮೆ ಮತ್ತು ಸಂತಸದ ಸಂಗತಿ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಸಮೀಪದ ಹಾಲಕೆರೆ ಗ್ರಾಮದಲ್ಲಿ ಜರುಗಿದ ಸಂಘದ ಶತಮಾನೋತ್ಸವ ಹಾಗೂ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಇಂದಿನ ಸಮಾರಂಭ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹುದು. ಇಂತಹ ಆಚರಣೆಗಳು ಹಿಂದಿನ ನ್ಯೂನತೆಗಳನ್ನು ಸರಿಪಡಿಸಿಕೊಂಡು ಮುನ್ನಡೆಯಲು ಪ್ರೇರಕವಾಗುತ್ತವೆ. ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಇದೇ ರೀತಿಯ ಹೊಂದಾಣಿಕೆಯಿಂದ ನಡೆದು ಈ ಸಂಘವನ್ನು ಇನ್ನಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕೆಂದು ಪಾಟೀಲ ತಿಳಿಸಿದರು.
ಸಂಘಗಳು ಬಲಗೊಳ್ಳಬೇಕಾದರೆ ಇವುಗಳಿಗೆ ಮಾತೃ ಸ್ವರೂಪಿಯಾಗಿರುವ ಕೆಸಿಸಿ ಬ್ಯಾಂಕ್ ಬಲಿಷ್ಠವಾಗಿರಬೇಕು. ಈಗ ಅದು ಉತ್ತಮ ಸ್ಥಿತಿಯಲ್ಲಿದ್ದು, ರೈತರು ಆತಂಕಪಡುವ ಸ್ಥಿತಿ ಈಗಿಲ್ಲ. ತಾಲೂಕಿನಲ್ಲಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕಾರ್ಯದ ಕ್ರಿಯಾ ಯೋಜನೆಯನ್ನು ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ಇದಕ್ಕೆ ಶೀಘ್ರದಲ್ಲಿ ಅನುಮೋದನೆ ದೊರಕಲಿದೆ. ಇದರಿಂದ ರೈತರ ಮತ್ತು ಸಾರ್ವಜನಿಕರ ಬಾಳು ಬಂಗಾರವಾಗುತ್ತದೆ. ರೈತರು ತಮ್ಮ ಹಕ್ಕುಗಳಿಗೆ ದನಿಯೆತ್ತಿದಾಗ ಮಾತ್ರ ಅವರ ಆಸೆಗಳು ಈಡೇರುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಅಂದಾನಗೌಡ ಪಾಟೀಲ ಮಾತನಾಡಿ, ಬೆತ್ತದ ಅಜ್ಜನವರಿಂದ ಪ್ರಾರಂಭಗೊಂಡ ಈ ಸಂಘಕ್ಕೆ ಅವರ ಸಂಪೂರ್ಣ ಆಶೀರ್ವಾದವಿದೆ. ಆದ್ದರಿಂದ ಸಂಘವು ನೂರು ವರ್ಷಗಳನ್ನು ಪೂರೈಸಿ ಮುನ್ನಡೆದಿದೆ. ಇದಕ್ಕೆ ಗ್ರಾಮಸ್ಥರೆಲ್ಲರೂ ನೀಡುತ್ತಿರುವ ಸಹಕಾರವನ್ನು ಎಂದಿಗೂ ಮರೆಯಲಾರೆ ಎಂದರು.
ರೋಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ, ಮುಖಂಡ ಐ.ಎಸ್. ಪಾಟೀಲ, ಎಚ್.ಎಸ್. ಸೋಂಪುರ, ಬಸವರಾಜ ಕಡೆಮನಿ ಮಾತನಾಡಿ, ಸಂಘದ ಶತಮಾನೋತ್ಸವಕ್ಕೆ ಶುಭ ಹಾರೈಸಿದರು. ಧುರೀಣ ಮಿಥುನ್ ಪಾಟೀಲ ರೈತ ಫಲಾನುಭವಿಗಳಿಗೆ ಟ್ರಾಕ್ಟರ್ ಸಾಲವನ್ನು ವಿತರಿಸಿದರು.
ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯ ಮೇಲೆ ಹಾಲಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶಗೌಡ ಮುಲ್ಕಿಪಾಟೀಲ, ಫಕೀರಪ್ಪ ಕುಕನೂರ, ಸಿದ್ದನಗೌಡ ಪಾಟೀಲ, ಸೊಪ್ಪಯ್ಯಸ್ವಾಮಿ ಸೊಪ್ಪಿಮಠ, ಎ.ಆರ್. ಮಲ್ಲನಗೌಡ್ರ, ಕೃಷ್ಣಗೌಡ ಪಾಟೀಲ, ಹನುಮಂತಪ್ಪ ದ್ವಾಸಲ, ವಿ.ಆರ್. ಗುಡಿಸಾಗರ, ಗುರಣ್ಣ ಅವರೆಡ್ಡಿ ಮುಂತಾದವರಿದ್ದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಶರಣರ ಕಾಯಕ ತತ್ವದ ಅಡಿಯಲ್ಲಿ ಈ ಸಂಘಗಳು ರಚನೆಯಾಗಿವೆ. ಪರಸ್ಪರ ಸಹಕಾರದಿಂದ ಸಾಗಿ ಎಲ್ಲರೂ ಅಭಿವೃದ್ಧಿ ಹೊಂದಲಿ ಎಂಬ ಸದಾಶಯದಿಂದ ಇವುಗಳಿಗೆ ಸಹಕಾರಿ ಸಂಘಗಳೆಂದು ಹೆಸರಿಸಲಾಗಿದೆ. ಎಲ್ಲರೂ ಸಹಕಾರದಿಂದ ನಡೆದು ಹಾಲಕೆರೆಯನ್ನು ಮಾದರಿ ಗ್ರಾಮ ಮಾಡಬೇಕೆಂದರು.