ರೈತರು ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಿ: ರಾಮಣ್ಣ ಹೂವಣ್ಣವರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ದೇಶದ ಆರ್ಥಿಕತೆಗೆ ಬೆನ್ನೆಲುಬಾಗಿರುವ ರೈತರು ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ರಾಮಣ್ಣ ಹೂವಣ್ಣವರ ಹೇಳಿದರು.

Advertisement

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಗದಗ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ಆತ್ಮ), ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ (NFSM), ಕೆಪೆಕ್ ಲಿಮಿಟೆಡ್ ಬೆಂಗಳೂರು ಇವರ ಜಂಟಿ ಸಹಯೋಗದಲ್ಲಿ ಪಿ.ಎಂ.ಎಫ್.ಎಪಿ.ಇ ಜಿಲ್ಲಾ ಮಟ್ಟದ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಧುನಿಕ ಕಾಲಕ್ಕೆ ತಕ್ಕಂತೆ ರೈತರು ಹೊಂದಿಕೊಂಡು ಅವಿಷ್ಕಾರಗೊಂಡ ಹಲವು ತಂತ್ರಜ್ಞಾನಗಳೊಂದಿಗೆ ಮುನ್ನಡೆಯಬೇಕಾಗಿದೆ. ಇದಕ್ಕೆ ಸರಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅವುಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ ಜಿ.ಎಸ್ ಮಾತನಾಡುತ್ತಾ, ಪ್ರಸಕ್ತ ವರ್ಷವು ಯೋಜನೆಯ ಅನುಷ್ಠಾನದ ಕೊನೆಯ ವರ್ಷವಾಗಿದ್ದು, ಜಿಲ್ಲೆಗೆ 200 ಘಟಕಗಳ ಗುರಿ ಇದೆ. ಈವರೆಗೆ 20 ಘಟಕಗಳಿಗೆ ಮಾತ್ರ ಸಾಲ ಮಂಜೂರಾತಿಯಾಗಿದ್ದು, ಆಸಕ್ತಿದಾರರು ಯೋಜನೆಯಡಿ ಅರ್ಜಿ ಸಲ್ಲಿಸಲು ತಿಳಿಸಿದರು.

ಜಿ.ಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಮಾತನಾಡಿ, ರೈತರು ಮಾರುಕಟ್ಟೆಯ ಬೇಡಿಕೆಗನುಗುಣವಾಗಿ ಬೆಳೆ ಬೆಳೆಯಲು ಹಾಗೂ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯಿಂದ ಆರ್ಥಿಕ ಪ್ರಗತಿ ಸಾಧಿಸಬೇಕೆಂದು ಸಲಹೆ ನೀಡಿದರು.

ಬೆಂಗಳೂರಿನ ಕೆಪೆಕ್ SPMU ಘಟಕದ ಸಲಹೆಗಾರರಾದ ವಿಷ್ಟೇಶ ಅವರು ಯೋಜನೆಯ ಕುರಿತು ವಿವರವಾಗಿ ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾದ ವಸ್ತು ಪ್ರದರ್ಶನದಲ್ಲಿ, PMFME ಯೋಜನೆಯಡಿಯ ಫಲಾನುಭವಿಗಳು, ತಮ್ಮ ಉದ್ದಿಮೆಯಲ್ಲಿ ತಯಾರಿಸಿದ ಗಾಣದ ಎಣ್ಣೆ, ಅವಲಕ್ಕಿ, ಖಾರದಪುಡಿ, ಖಡಕ್ ರೊಟ್ಟಿ, ಶೇಂಗಾ ಚಟ್ಟಿ, ವಿವಿಧ ಸಿಹಿ ತಿನಿಸುಗಳು ಸೇರಿದಂತೆ ಹಲವು ಆಹಾರ ಉತ್ಪನ್ನಗಳನ್ನು ಪ್ರದರ್ಶಿಸಿದರು. ಯಶಸ್ವಿ ಫಲಾನುಭವಿಗಳಾದ ಮುಳುಗುಂದದ ರಾಜೇಶ್ವರಿ ಬಡ್ನಿ, ಮಲ್ಲಸಮುದ್ರದ ಅನ್ನಪೂರ್ಣೇಶ್ವರಿ ಏಲಿ, ಮುಂಡರಗಿಯ ವಾಸುದೇವ ಇಲ್ಲೂರು ಹಾಗೂ ಕುರಹಟ್ಟಿಯ ರಾಮನಗೌಡ ಪಾಟೀಲ ಈ ಯೋಜನೆಯಡಿ ಲಾಭಪಡೆದು ಯಶಸ್ವಿಯಾದ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಶಾರದಾ, ಶೃತಿ, ಹಾಗೂ ಪ್ರವೀಣ ಇವರಿಗೆ ಯೋಜನೆಯಡಿ ಕೆ.ವಿ.ಜಿ.ಬಿ ಬ್ಯಾಂಕ್ನಿಂದ ಸಾಲ ಮಂಜೂರಾತಿ ಪತ್ರವನ್ನು ಸಂತೋಷ ಮಾಲನಹಳ್ಳಿ ನೀಡಿದರು. ಗದಗ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಪ್ರತಿನಿಧಿಗಳಾಗಿ ಗಿರೀಶ ಕುಮಾರ, ಸಂತೋಷ ಜವಳಿ ಹಾಗೂ ಜಯಶ್ರೀ ಹಿರೇಮಠ ಮಾತನಾಡಿದರು.

ತಾಂತ್ರಿಕ ಅಧಿಕಾರಿ ಸಿದ್ದೇಶ ಮಾತನಾಡಿದರು. ಸಭೆಯಲ್ಲಿ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಹುಲುಗಣ್ಣನವರ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಶಿಕಾಂತ ಕೋಟಿಮನಿ, ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಕೈಲಾಸ ಮೂರ್ತಿ, ವಾರ್ತಾ ಇಲಾಖೆಯ ವಸಂತ ಮಡ್ಲೂರ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕುಬೇರರೆಡ್ಡಿ ನೀಲಣ್ಣವರ ಮುಂತಾದವರು ಉಪಸ್ಥಿತರಿದ್ದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಜಿ.ಎಚ್. ತಾರಾಮಣಿ ಸ್ವಾಗತಿಸಿದರು. ಸಹಾಯಕ ಕೃಷಿ ನಿರ್ದೇಶಕಿ (ರೈ.ಮ) ಸೀಮಾ ಸವಣೂರು ಕಾರ್ಯಕ್ರಮ ನಿರೂಪಿಸಿದರು.

ಅಪರ ಜಿಲ್ಲಾಧಿಕಾರಿ ದುರ್ಗೇಶ ಕೆ.ಆರ್ ಮಾತನಾಡಿ, ಜಿಲ್ಲೆಯ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿಗೆ ಪೂರಕವಾಗಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (PMFME) ಯೋಜನೆಯಡಿ ಹೊಸ ಆಹಾರ ಸಂಸ್ಕರಣಾ ಉದ್ದಿಮೆ ಪ್ರಾರಂಭಿಸಲು ಹಾಗೂ ಚಾಲ್ತಿಯಲ್ಲಿರುವ ಉದ್ದಿಮೆಗಳನ್ನು ವಿಸ್ತರಿಸಲು ಗರಿಷ್ಠ 15 ಲಕ್ಷದವರೆಗೆ ಶೇ. 50ರಷ್ಟು ಸಹಾಯಧನ ಲಭ್ಯವಿದ್ದು, ಸಾರ್ವಜನಿಕರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.


Spread the love

LEAVE A REPLY

Please enter your comment!
Please enter your name here