ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರೈತ ದೇಶದ ಬೆನ್ನೆಲುಬು. ಅವನು ಕಷ್ಟಪಟ್ಟು ದುಡಿದಾಗ ನಮಗೆಲ್ಲ ಅನ್ನ ಸಿಗುತ್ತದೆ ಎಂಬುದನ್ನು ಮರೆಯಬಾರದು. ಕಾರಣ ರೈತರು ಬೆಳೆದ ಬೆಳೆಗೆ ಯಾವಾಗಲೂ ಉತ್ತಮ ದರ ಸಿಗುವ ವ್ಯವಸ್ಥೆ ಆಗಬೇಕು. ಆಗ ಮಾತ್ರ ಒಕ್ಕಲಿಗ ಬದುಕಲು ಸಾಧ್ಯ. ಈಚಿನ ದಿನಗಳಲ್ಲಿ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದ ಕಾರಣ ಯುವಕರು ಕೃಷಿ ಕ್ಷೇತ್ರಕ್ಕೆ ಹೋಗುತ್ತಿಲ್ಲ. ಹೀಗೆಯೇ ಪರಿಸ್ಥಿತಿ ಮುಂದುವರೆದರೆ ಮುಂದೊಂದು ದಿನ ಆಹಾರಕ್ಕಾಗಿ ಹಾಹಾಕಾರ ಉಂಟಾಗಬಹುದು. ಮಕ್ಕಳಿಗೆ ಬಾಲ್ಯದಲ್ಲಿಯೇ ರೈತರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಎಂಜಿಎಂ ಶಾಲೆಯವರು ಹಮ್ಮಿಕೊಂಡಿರುವ ರೈತ ದಿನಾಚರಣೆ ಉತ್ತಮ ಬೆಳೆವಣಿಗೆಯಾಗಿದೆ ಎಂದು ಸಿಆರ್‌ಪಿ ಶಿವಾನಂದ ಅಸುಂಡಿ ಅಭಿಪ್ರಾಯಪಟ್ಟರು.
ಪಟ್ಟಣದ ಎಂಜಿಎಂ ಯುನಿವರ್ಸಲ್ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೈತ ಹಾಗೂ ಮಾರುಕಟ್ಟೆ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಹೇಮಂತ್ ಟಗರಿ ಮಾತನಾಡಿ, ಮಕ್ಕಳಲ್ಲಿ ಮಾರುಕಟ್ಟೆಯ ಬಗ್ಗೆ ಜ್ಞಾನ ಉಂಟಾಗಲಿ ಎಂಬ ಉದ್ದೇಶದಿಂದ ನಾವು ಶಾಲೆಯಲ್ಲಿ ಮಾರುಕಟ್ಟೆ ದಿನ ಹಮ್ಮಿಕೊಂಡಿದ್ದೇವೆ. ವಿದ್ಯೆ ಪಡೆಯುವುದರೊಂದಿಗೆ ದಿನನಿತ್ಯದ ಬದುಕಿಗೆ ಅವಶ್ಯವಿರುವ ವಾಣಿಜ್ಯ, ವ್ಯವಹಾರ, ಮಾರುಕಟ್ಟೆಗಳ ಕುರಿತು ಮಕ್ಕಳು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳು ಮಾರುಕಟ್ಟೆ ದಿನದ ಅಂಗವಾಗಿ ತರಕಾರಿ, ಧಾನ್ಯ ಹಾಗೂ ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ಅನುಭವವನ್ನು ಪಡೆದರು. ಪಾಲಕರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಿದರು. ಅರುಣ ಉಮಚಗಿ ಸ್ವಾಗತಿಸಿದರು. ಪುಷ್ಪಾ ನರೇಗಲ್ಲ ನಿರೂಪಿಸಿದರು. ಶಿಕ್ಷಕಿಯರಾದ ಪ್ರೀತಿ ಹಾಗೂ ಯೋಗಿತಾ ವಂದಿಸಿದರು.



