ವಿಜಯಸಾಕ್ಷಿ ಸುದ್ದಿ, ಗದಗ: ಕೃಷಿಯಲ್ಲಿರುವ ಹಲವಾರು ಸಮಸ್ಯೆಗಳಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೃಷಿಯನ್ನು ಲಾಭದಾಯಕವಾಗಿ ಮಾಡಬೇಕು, ನೈಸರ್ಗಿಕ ಕೃಷಿಯನ್ನು ಮಾಡಲು ರೈತರು ಮುಂದೆ ಬರಬೇಕು. ಇದರಿಂದ ರೈತರ ಆತ್ಮಹತ್ಯೆಯ ಪ್ರಕರಣಗಳು ಕಡಿಮೆ ಆಗಬೇಕು. ಇಲ್ಲಿ ಸೇರಿರುವ ರೈತರೆಲ್ಲರೂ ಸೇರಿ ಸೂಕ್ತವಾದ ನಿರ್ಣಯಗಳನ್ನು ಕೈಗೊಂಡರೆ ಅವುಗಳನ್ನು ಈಡೇರಿಸಲು ರಾಜಕೀಯ ಹಾಗೂ ಕಾನೂನಾತ್ಮಕ ನೀತಿಗಳನ್ನು ಜಾರಿಗೊಳಿಸಲು ನಾವು ಬದ್ಧರಾಗಿದ್ದೇವೆ ಎಂದು ಕಾನೂನು, ಪ್ರವಾಸೋದ್ಯಮ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಾಡು ಕಂಡ ಅಪರೂಪದ ರಾಜಕಾರಣಿ, ಸಹಕಾರಿ ರಂಗದ ಭೀಷ್ಮ ಕೆ.ಎಚ್. ಪಾಟೀಲರ ಜನ್ಮ ಶತಮಾನೋತ್ಸವ (1925-2025) ಸಂಭ್ರಮದ ಅಂಗವಾಗಿ ಹುಲಕೋಟಿಯ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ನೈಸರ್ಗಿಕ ಕೃಷಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಚೇರಮನ್ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಈ ದಿಶೆಯಲ್ಲಿ ನಾವು ಕೆಲಸ ಮಾಡುತ್ತಿದ್ದು, ಇನ್ನೂ ಹೆಚ್ಚು ಕೆಲಸ ಆಗಬೇಕು. ರೈತರು ಕೃಷಿಯಲ್ಲಿ ಖರ್ಚನ್ನು ಕಡಿಮೆ ಮಾಡಲು ನೈಸರ್ಗಿಕ ಕೃಷಿ ಒಂದು ಉತ್ತಮ ಕೊಡುಗೆಯಾಗಿದೆ. ಪ್ರತಿಯೊಬ್ಬರೂ ವಿಷಮುಕ್ತ ಆಹಾರವನ್ನು ದಿನನಿತ್ಯ ಸೇವಿಸುವಂತಾಗಬೇಕು ಎಂದು ತಿಳಿಸಿದರು.
ವೇದಿಕೆ ಮೇಲೆ ಪ್ರಗತಿಪರ ರೈತರಾದ ಸಿದ್ದಪ್ಪ ಕರಿಕಟ್ಟಿ, ಅಕ್ಬರಸಾಬ ಬಬರ್ಚಿ, ಡಾ. ಎಲ್.ಜಿ. ಹಿರೇಗೌಡರ, ಡಾ. ಸುಧಾ ವ್ಹಿ.ಮಂಕಣಿ ಉಪಸ್ಥಿತರಿದ್ದರು. ರಾಜ್ಯದ 18 ಜಿಲ್ಲೆಗಳಿಂದ ಆಗಮಿಸಿದ್ದ 230 ಜನ ರೈತರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ತುಮಕೂರಿನ ನೈಸರ್ಗಿಕ ಕೃಷಿ ತಜ್ಞರಾದ ಪ್ರಸನ್ನ ಮೂರ್ತಿ ಮಾತನಾಡಿ, ನಮ್ಮ ಹೊಲದ ಮಣ್ಣು ಹೊಲದಿಂದ ಹೊರಗೆ ಹೋಗದಂತೆ ತಡೆಯುವದು, ಬಿದ್ದ ನೀರು ಇಂಗುವಂತೆ ಮಾಡುವುದು ಅತ್ಯಗತ್ಯ. ತಮ್ಮ ಹೊಲದ ಬೀಜವನ್ನು ತಾವೇ ಉಪಯೋಗಿಸಬೇಕು ಎಂದರಲ್ಲದೆ, ಒಂದು ಜವಾರಿ ಆಕಳನ್ನು ಸಾಕಿ ಅದರಿಂದ ಸಿಗುವ ಗಂಜಲು ಮತ್ತು ಸೆಗಣಿ ಉಪಯೋಗಿಸಿ ತಮ್ಮ 6 ಎಕರೆ ಕ್ಷೇತ್ರದಲ್ಲಿ ನೈಸರ್ಗಿಕ ಕೃಷಿಯನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.