ವಿಜಯಸಾಕ್ಷಿ ಸುದ್ದಿ, ರೋಣ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕಾ ಘಟಕದ ವತಿಯಿಂದ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಿದರು.
ಪಟ್ಟಣದ ಎಪಿಎಂಸಿ ಆವರಣದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪಟ್ಟಣದ ಜಕ್ಕಲಿ ರಸ್ತೆ, ಮುಲ್ಲಾನ ಭಾವಿ ವೃತ್ತ ಹಾಗೂ ಪೋತರಾಜನ ಕಟ್ಟೆಯ ಬಳಿ ಮಾನವ ಸರಪಳಿ ನಿರ್ಮಿಸಿ ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಿರುದ್ಧ ಧಿಕ್ಕಾರ ಕೂಗುತ್ತಾ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಸಂಗಪ್ಪ ಪವಾಡಶೆಟ್ಟರ ಮಾತನಾಡಿ, ಅತಿಯಾದ ಮಳೆಯಿಂದ ಮುಂಗಾರು ಬೆಳೆಗಳನ್ನು ಕಳೆದುಕೊಂಡಿರುವುದು ನಾಡಿಗೆ ತಿಳಿದಿರುವ ಸಂಗತಿ. ಮುಂಗಾರು ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಇದರಿಂದ ರೈತರ ಸಂಕಷ್ಟ ಹೆಚ್ಚಾಗಿದೆ. ಸರಕಾರ ಪರಿಹಾರ ವಿತರಣೆಯಲ್ಲಿಯೂ ಸಹ ಲೋಪದೋಷಗಳನ್ನು ಮಾಡಿದೆ. ಎಲ್ಲ ರೈತರಿಗೂ ಸಮರ್ಪಕವಾಗಿ ಪರಿಹಾರ ಸಿಕ್ಕಿಲ್ಲ. ಕೂಡಲೇ ಸರಕಾರ ಲೋಪವನ್ನು ಸರಿಪಡಿಸಿ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.
ಮೇಘರಾಜ ಭಾವಿ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಬೆಳೆದ ಬೆಳೆಗಳಿಗೆ ಸಮರ್ಪಕ ಬೆಲೆ ಸಿಗದಿದ್ದರೆ ರೈತರು ಮಾಡಿದ ಸಾಲವನ್ನು ತೀರಿಸುವುದು ಕಷ್ಟವಾಗಲಿದೆ. ಇದನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ಅರಿಯಬೇಕು. ಜೊತೆಗೆ ಬೆಂಬಲ ಬೆಲೆ ನಿಗದಿ ಮಾಡಬೇಕು. ಅಂದಾಗ ಮಾತ್ರ ರೈತರು ಕೃಷಿ ಮಾಡಲು ಸಾಧ್ಯ ಎಂದರು.
ಪ್ರತಿಭಟನೆಯಲ್ಲಿ ಮುತ್ತಣ್ಣ ಚೌಡರೆಡ್ಡಿ, ಸಂಗಪ್ಪ ದಂಡಿನ, ಧರ್ಮಣ್ಣ ಭೂಸಗೌಡ್ರ, ಅಶೋಕ ಹಿರೇಮಠ, ರುದ್ರಯ್ಯ ಸಾಲಿಮಠ, ಗಂಗಣ್ಣ ಕೊಟಗಿ, ರಾಮಣ್ಣ ಸೂಡಿ, ಬೂದಪ್ಪ ಕಂಬಳಿ, ಹನಮಂತ ಅಬ್ಬಿಗೇರಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.



