ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಬೇಸಿಗೆಯ ಬಿರು ಬಿಸಿಲಿನಿಂದ ತೋಟಗಾರಿಕೆ ಬೆಳೆ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ರಕ್ಷಣೆಗೆ ಟ್ಯಾಂಕರ್ ನೀರು ಒದಗಿಸಿ ಎಂದು ಅಂಗಲಾಚುತ್ತಿದ್ದಾರೆ.
ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಸಹಿತ ಜಿಲ್ಲೆಯ ಎಲ್ಲ ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿತವಾಗಿ ಕೊಳವೆ ಬಾವಿಗಳಲ್ಲೂ ನೀರಿನ ಕೊರತೆಯಾಗಿದೆ. ಹೀಗಾಗಿ ತೋಟಗಾರಿಕೆ ಬೆಳೆ ರಕ್ಷಣೆಗೆ ಟ್ಯಾಂಕರ್ ನೀರು ಕೊಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಬಹುವಾರ್ಷಿಕ ತೋಟಗಾರಿಕೆ ಬೆಳೆಯುವ ರೈತರ ಪೈಕಿ ಕೆಲವರು ಈಗಾಗಲೇ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿ ಬೆಳೆ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಎಲ್ಲ ರೈತರಿಗೂ ಈ ರೀತಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತೋಟಕ್ಕೆ ಭೇಟಿ ನೀಡುವ ಅಧಿಕಾರಿಗಳಿಗೆ ಟ್ಯಾಂಕರ್ ನೀರು ಪೂರೈಕೆ ಮಾಡಿ ಎಂದು ರೈತರು ಒತ್ತಾಯಿಸುತ್ತಿದ್ದಾರೆ.
ಬಹುವಾರ್ಷಿಕ ಬೆಳೆಗಳಿಗೆ ಕಾಲಕಾಲಕ್ಕೆ ನೀರು ಬೇಕೇ ಬೇಕು. ಆದರೆ ಈ ವರ್ಷ ಮಳೆ ಕೊರತೆಯಿಂದ ಅಂತರ್ಜಲ ಕುಸಿತವಾಗಿದೆ. ಬಾವಿ, ಬೋರ್‌ವೆಲ್‌ಗಳಲ್ಲಿಯೂ ನೀರು ಸಿಗುತ್ತಿಲ್ಲ. ನೀರು ಉಣಿಸದಿದ್ದರೆ ಬೆಳೆಗಳು ಬದುಕುವುದು ಕಷ್ಟ. ಕನಿಷ್ಠ ಪಕ್ಷ ಮುಂಗಾರು ಪೂರ್ವ ಮಳೆಯಾಗುವವರೆಗೆ ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಂಡಾದರೂ ಟ್ಯಾಂಕರ್ ಮೂಲಕ ಒಂದೆರಡು ಬಾರಿ ನೀರು ಕೊಡುವಂಥ ಕೆಲಸ ಮಾಡಿದರೆ ಬೆಳೆಗಳು ರಕ್ಷಣೆಯಾಗುತ್ತವೆ ಎನ್ನುತ್ತಾರೆ ತೋಟಗಾರಿಕೆ ಬೆಳೆಗಾರರು.
ನೀರು ಪೂರೈಕೆ ಕಷ್ಟ
ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿ ಬೆಳೆ ರಕ್ಷಣೆ ಮಾಡಿಕೊಳ್ಳುವುದು ಕಷ್ಟ. ಆದರೆ ಕೆಲವು ಉಪಯುಕ್ತ ಕ್ರಮಗಳನ್ನು ಕೈಗೊಂಡು ಬಹುವಾರ್ಷಿಕ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಮುಖ್ಯವಾಗಿ ಕೀಟ ಬಾಧೆ, ರೋಗಕ್ಕೆ ತುತ್ತಾದ ಬೆಳೆಗಳನ್ನು ಕಿತ್ತು ಒಂದೆಡೆ ಮುಚ್ಚಿ ಹಾಕುವುದು, ಗಿಡದ ಸುತ್ತಲೂ ಪಾತಿ ಮಾಡಿ, ನೆಲಹೊದಿಕೆ ಮಾಡಿಕೊಂಡು ತೇವಾಂಶ ಹಿಡಿದಿಟ್ಟುಕೊಳ್ಳಲು ಅವಕಾಶ ಕಲ್ಪಿಸುವುದು, ಹನಿ ನೀರಾವರಿ ಮೂಲಕ ನೀರು ಪೂರೈಕೆ, ಸಾವಯವ ಗೊಬ್ಬರದ ಜೊತೆಗೆ ಅಣುಜೀವಿ ಗೊಬ್ಬರ ಕೊಟ್ಟು, ಸಾಧ್ಯವಾದರೆ ಮಾತ್ರ ಟ್ಯಾಂಕರ್ ಮೂಲಕ ನೀರು ಪೂರೈಸಿದರೆ ತೋಟಗಾರಿಕೆ ಬೆಳೆ ರಕ್ಷಣೆ ಮಾಡಬಹುದು ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುರೇಶ ಕುಂಬಾರ.
ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನ ತೋಟಗಾರಿಕೆ ಬೆಳೆ ಬೆಳೆದ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಅಂತರ್ಜಲ ಕುಸಿತವಾಗಿರುವುದು ಗಮನಕ್ಕೆ ಬಂದಿದೆ. ಬೆಳೆ ರಕ್ಷಣೆಗೆ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ರೈತರು ಒತ್ತಾಯಿಸಿದ್ದಾರೆ. ಟ್ಯಾಂಕರ್ ನೀರು ಪೂರೈಕೆ ಕುರಿತು ಇಲಾಖೆಯ ಉಪನಿರ್ದೇಶಕರಿಗೆ ಪತ್ರ ಬರೆಯಲಾಗಿದೆ.
– ಸುರೇಶ ಕುಂಬಾರ.
ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ.