HomeGadag Newsಮರವೇರಿ ಆತ್ಮಹತ್ಯೆಗೆ ಯತ್ನಿಸಿದ ರೈತರು

ಮರವೇರಿ ಆತ್ಮಹತ್ಯೆಗೆ ಯತ್ನಿಸಿದ ರೈತರು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗೋಮಾಳ ಭೂಮಿಯನ್ನು ಉಳುಮೆ ಮಾಡಲು ಅವಕಾಶ ಕೊಡಬಾರದು ಎಂದು ಗೋಮಾಳ ಜಾಗದಲ್ಲಿಯೇ ಧರಣಿ ನಡೆಸುತ್ತಿದ್ದ ಬಾಲೇಹೊಸೂರಿನ ರೈತರು ಮರವೇರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ಜರುಗಿದೆ.

ತಾಲೂಕಿನ ಬಾಲೇಹೊಸೂರ-ಯಲ್ಲಾಪುರ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿನ 400 ಎಕರೆಗಿಂತ ಹೆಚ್ಚು ವಿಸ್ತೀರ್ಣದ ಗೋಮಾಳ ಭೂಮಿಗಾಗಿ ಯಲ್ಲಾಪುರ ತಾಂಡಾ ಮತ್ತು ಬಾಲೆಹೊಸೂರ ಗ್ರಾಮಗಳ ನಡುವೆ ಹತ್ತಾರು ವರ್ಷಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಿದೆ.

ಏತನ್ಮದ್ಯೆ ಇತ್ತೀಚೆಗೆ ಲಕ್ಷ್ಮೇಶ್ವರ ತಹಸೀಲ್ದಾರರು ಗೋಮಾಳ ಭೂಮಿಯನ್ನು ಹೊಸದಾಗಿ ಯಾರೂ ಉಳುಮೆ ಮಾಡಬಾರದು ಎಂದು ಸಂದೇಶ ರವಾನಿಸಿದ್ದರಂತೆ. ಇದರಿಂದ ಅಸಮಾಧಾನಗೊಂಡ ಯಲ್ಲಾಪುರದ ರೈತರು ಸೋಮವಾರವಷ್ಟೇ ಗದಗ ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ರವಿಕಾಂತ ಅಂಗಡಿ ನೇತೃತ್ವದಲ್ಲಿ ತಹಸೀಲ್ದಾರ ಕಚೇರಿಯ ಮುಂದೆ ಪ್ರತಿಭಟನೆ ಕೈಗೊಂಡಿದ್ದರು. ಈ ವೇಳೆ ತಹಸೀಲ್ದಾರರು ಹಿರಿಯರ ಕಾಲದಿಂದ ಉಳುಮೆ ಮಾಡುತ್ತಾ ಬಂದಿರುವ ರೈತರ ಬಗ್ಗೆ ಮಾಹಿತಿ ಕಲೆ ಹಾಕುತ್ತೇವೆ. ಹೊಸದಾಗಿ ಯಾರೂ ಉಳುಮೆ ಮಾಡಬಾರದು ಎಂದು ಸಮಜಾಯಿಷಿ, ಕಾನೂನು ತಿಳುವಳಿಕೆ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ನೋಡಿಕೊಂಡಿದ್ದರು.

ಕಳೆದ 2 ದಿನಗಳಿಂದ ಯಲ್ಲಾಪುರದ ರೈತರು ಉಳುಮೆ, ಬಿತ್ತನೆ ಕಾರ್ಯ ಮಾಡುವುದನ್ನು ಗಮನಿಸಿದ ಬಾಲೆಹೊಸೂರಿನ ರೈತರು ಮತ್ತು ಯಲ್ಲಾಪುರ ರೈತರ ನಡುವೆ ಬುಧವಾರ ಕೊಂಚ ಮಾತಿನ ಚಕಮಕಿ ನಡೆದಿದೆ. ಬಾಲೇಹೊಸೂರಿನ ರೈತರು ಗೋಮಾಳ ಭೂಮಿ ನಮ್ಮೂರ ಹದ್ದಿನಲ್ಲಿದೆ. ಈ ಭೂಮಿಯಲ್ಲಿ ನಾವೂ ಉಳುಮೆ ಮಾಡುವುದಿಲ್ಲ. ನೀವೂ ಮಾಡಬೇಡಿ. ಈ ಭೂಮಿ ನಮಗೆ ಹಸು, ಕುರಿ ಮೇಯಿಸಲು ಬೇಕು ಎಂದು ಪಟ್ಟು ಹಿಡಿದು ಸ್ಥಳದಲ್ಲಿಯೇ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.

ಈ ವೇಳೆ ಬಾಲೆಹೊಸೂರಿನ ಮಾರುತಿ ಒಂಟಿ, ಭೀಮಪ್ಪ ಭಜಂತ್ರಿ ಎಂಬ ರೈತರು ಅಲ್ಲಿಯೇ ಇದ್ದ ಮರವೇರಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಲಕ್ಷ್ಮೇಶ್ವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ವಿಷಯ ತಿಳಿದ ತಹಸೀಲ್ದಾರ ವಾಸುದೇವ ಸ್ವಾಮಿ ಅವರು ಸ್ಥಳಕ್ಕಾಗಮಿಸಿ ಗೋಮಾಳ ಭೂಮಿಯ ವಿವಾದ ನ್ಯಾಯಾಲಯದಲ್ಲಿದ್ದು, ಸದ್ಯಕ್ಕೆ ಯಾವುದೇ ತೀರ್ಮಾನ ಸಾಧ್ಯವಿಲ್ಲ. ಯಾರೂ ದುಡುಕಿನ ನಿರ್ಧಾರ ಕೈಗೊಳ್ಳುವುದು ಬೇಡ ಎಂದು ಸಮಾಧಾನ ಹೇಳಿದರು.

ಇದಕ್ಕೆ ಒಪ್ಪದ ರೈತರು, ನೂರಾರು ವರ್ಷಗಳಿಂದ ದನ-ಕರು, ಕುರಿ ಮೇಯಿಸಲು ಈ ಗೋಮಾಳ ಭೂಮಿಯೇ ನಮಗೆ ಆಧಾರವಾಗಿದೆ. ಇದರ ರಕ್ಷಣೆಗಾಗಿ ಎಂತಹ ಹೋರಾಟ, ತ್ಯಾಗಕ್ಕೂ ಸಿದ್ಧ ಎಂದು ಪಟ್ಟು ಹಿಡಿದು ಧರಣಿ ಮುಂದುವರೆಸಿದ್ದಾರೆ.

ಧರಣಿಯಲ್ಲಿ ರೈತರಾದ ಸಣ್ಣಪ್ಪ ಕಂಬಳಿ, ಶಿವರಾಜ ಭಜಂತ್ರಿ, ದುರಗಪ್ಪ ಬಸಣ್ಣವರ, ಬಸವರಾಜ ಪೆದ್ದರ, ಲಕ್ಷ್ಮಣ ಭಜಂತ್ರಿ, ಶಿವರಾಜ ಒಂಟಿ, ಪರಶುರಾಮ ಭಜಂತ್ರಿ, ಮಲ್ಲಪ್ಪ ಕಂಬಳಿ, ನಾಗರಾಜ ಕಂಬಳಿ, ರಮೇಶ ಭಜಂತ್ರಿ, ಹನಮಪ್ಪ ಬಸಣ್ಣವರ ಸೇರಿ ರೈತರು ಪಾಲ್ಗೊಂಡಿದ್ದಾರೆ.

ಇನ್ನೊಂದೆಡೆ ಯಲ್ಲಾಪುರದ ರೈತರು ನಾವು ಈ ಭೂಮಿಯನ್ನು ನಮ್ಮ ಹಿರಿಯರ ಕಾಲದಿಂದಲೂ ಉಳುಮೆ ಮಾಡುತ್ತಾ ಬಂದಿದ್ದೇವೆ. ನಮ್ಮನ್ನು ಒಕ್ಕಲೆಬ್ಬಿಸುವ ಬದಲಾಗಿ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನಿನಡಿ ನಮಗೆ ಹಕ್ಕುಪತ್ರ ಕೊಡಲೇಬೇಕು ಎಂದು ನಿರಂತರ ಹೋರಾಟ ನಡೆದಿದೆ. ವಿಷಯ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಸ್ಥಳದಲ್ಲಿ ಪೊಲೀಸರು, ಕಂದಾಯ ಇಲಾಖೆಯ ಸಿಬ್ಬಂದಿಗಳು ಬೀಡು ಬಿಟ್ಟಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!