HomeGadag Newsಮಾದರಿ ಕಾರ್ಯವೋ, ಆಡಳಿತದ ನಿರ್ಲಕ್ಷ್ಯವೋ?

ಮಾದರಿ ಕಾರ್ಯವೋ, ಆಡಳಿತದ ನಿರ್ಲಕ್ಷ್ಯವೋ?

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಗೊಜನೂರ ಗ್ರಾಮದ ರೈತರೆಲ್ಲರೂ ಸೇರಿ ಸ್ವಂತ ಹಣ ಖರ್ಚು ಮಾಡಿ ತಮ್ಮ ಜಮೀನುಗಳಿಗೆ ಸಂಪರ್ಕಿಸುವ ರಸ್ತೆಯನ್ನು ದುರಸ್ತಿ ಮಾಡಿಕೊಂಡಿದ್ದಾರೆ. ಇದು ಮಾದರಿ ಕಾರ್ಯ ಎನ್ನಬೇಕೋ ಅಥವಾ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸರಕಾರದ ನಿರ್ಲಕ್ಷ್ಯವೆನ್ನಬೇಕೋ ಜನರೇ ಉತ್ತರಿಸಬೇಕಿದೆ.

ಗೊಜನೂರಿನಿಂದ ಯಳವತ್ತಿ ಸಂಪರ್ಕಿಸುವ ಮಾರ್ಗ ಸಂಪೂರ್ಣ ಹಾಳಾಗಿ ವರ್ಷದುದ್ದಕ್ಕೂ ರೈತರು ತಮ್ಮ ಜಮೀನುಗಳಿಗೆ ತೆರಳಲು ಪರದಾಡಿದ್ದಾರೆ. ಸಂಬಂಧಪಟ್ಟ ಯಾರೂ ಇವರ ಮನವಿಗೆ ಸ್ಪಂದಿಸಿಲ್ಲ. ಕೊನೆಗೆ ರೈತರೆಲ್ಲ ಸೇರಿ ತಮ್ಮದೇ ಟ್ರ್ಯಾಕ್ಟರ್‌ನಿಂದ 60 ಲೋಡ್ ಮಣ್ಣನ್ನು ರಸ್ತೆಗೆ ಹಾಕಿ ಜೆಸಿಬಿಯಿಂದ ರಸ್ತೆ ದುರಸ್ತಿ ಮಾಡಿಕೊಂಡು ಬೀಗಿದ್ದಾರೆ. ಈ ಕಾರ್ಯದಲ್ಲಿ ರೈತರಾದ ಮಾಂತೇಶ ಸೊರಟೂರ, ಸಂತೋಷ ಮಾಡಳ್ಳಿ, ಶಂಭುಲಿಂಗಪ್ಪ ಸೊರಟೂರ, ಹೊಳಲಪ್ಪ ಕರೆಣ್ಣವರ, ನಿಂಗಪ್ಪ ಮೋಡಿ, ಪರಸಪ್ಪ ಜಾಲವಾಡಗಿ, ವಿರೇಶ ಸೊರಟೂರ, ಮೈಲಾರಪ್ಪ ಕಲ್ಲೂರ, ಗಂಗಾಧರ ಹಿರೇಮಠ ಸೇರಿ ಅನೇಕ ರೈತರು ಕಾರ್ಯನಿರ್ವಹಿಸಿದರು.

ರೈತ ಮುಖಂಡ ಚನ್ನಪ್ಪ ಷಣ್ಮುಕಿ ಈ ಕುರಿತು ಪ್ರತಿಕ್ರಿಯಿಸಿ, ತಾಲೂಕಿನ ಬಹುತೇಕ ರೈತ ಸಂಪರ್ಕ ರಸ್ತೆಗಳು ಹಾಳಾಗಿದ್ದು, ರೈತರು ಕೃಷಿ ಚಟುವಟಿಕೆಗಳಿಗೆ ಹರಸಾಹಸ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲದಲ್ಲಂತೂ ಅವರ ಗೋಳು ಹೇಳತೀರದಾಗಿದೆ. ರಸ್ತೆ ಸುಧಾರಣೆಗೆ ಕಂಡ ಕಂಡವರಲ್ಲಿ ಗೋಗರೆಯುತ್ತಾರೆ. ಆದರೆ ಇವರ ಗೋಳು-ಕಷ್ಟ ಕೇಳುವವರಿಲ್ಲದಂತಾಗಿದೆ. ರಸ್ತೆ ಸಮಸ್ಯೆಯಿಂದ ಅನೇಕ ರೈತರ ಜಮೀನುಗಳು ಬೀಳು ಬಿದ್ದಿವೆ.

ಹೇಗೋ ಕಷ್ಟಪಟ್ಟು ಜಮೀನು ಹದಗೊಳಿಸಿ ಬಿತ್ತನೆ ಮಾಡಿದರೆ ಬೆಳೆದ ಫಸಲು/ಮಹಸಿಲು ಮನೆಗೆ ತರಲಾಗದ ಪರಿಸ್ಥಿತಿ ಇದೆ. ಈ ಬಗ್ಗೆ ರೈತರು ಸಂಬಂಧಪಟ್ಟವರಿಗೆ ಕೊಟ್ಟ ಮನವಿಗಳು ಕಸದ ಬುಟ್ಟಿ ಸೇರಿವೆ.

ಹೋರಾಟಗಳಿಗೆ ಕಿಮ್ಮತ್ತಿಲ್ಲದಂತಾಗಿದೆ. ಇದನ್ನರಿತ ನಮ್ಮೂರಿನ ರೈತರೆಲ್ಲರೂ ಸೇರಿ ಸ್ವಂತ ಖರ್ಚಿನಲ್ಲಿ ಟ್ರ್ಯಾಕ್ಟರ್‌ನಿಂದ ಮಣ್ಣು ಹಾಕಿ ಜಮೀನುಗಳಿಗೆ ಹೋಗಿ-ಬರಲು ಅನಕೂಲವಾಗುವಂತೆ ರಸ್ತೆ ದುರಸ್ತಿ ಮಾಡಿಕೊಂಡಿದ್ದೇವೆ ಎಂದು ಹೆಮ್ಮೆಯಿಂದ ಹೇಳಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!