ತುಮಕೂರು: ಜಿಲ್ಲೆಯ ಶಿರಾ ಬೈಪಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಓವರ್ಟೇಕ್ ಮಾಡುವ ವೇಳೆ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ.
ಘಟನೆ ಪರಿಣಾಮ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, 20 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದದಿಂದ ಬೆಂಗಳೂರು ಕಡೆಗೆ ಕೆಎಸ್ಆರ್ಟಿಸಿ ಬಸ್ ತೆರಳುತ್ತಿತ್ತು. ಇತ್ತ ಹುಬ್ಬಳ್ಳಿ ಕಡೆಯಿಂದ ಬೆಂಗಳೂರು ಕಡೆಗೆ ಖಾಸಗಿ ಬಸ್ ತೆರಳುತ್ತಿತ್ತು. ಓವರ್ಟೇಕ್ ಮಾಡಲು ಹೋಗಿ ಹಿಂಬದಿಯಿಂದ ಖಾಸಗಿ ಬಸ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ.
ಪರಿಣಾಮ, ಕೆಎಸ್ಆರ್ಟಿಸಿ ಬಸ್ನಲ್ಲಿದ್ದ 12 ಪ್ರಯಾಣಿಕರು ಹಾಗೂ ಖಾಸಗಿ ಬಸ್ನಲ್ಲಿದ್ದ 6 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಶಿರಾ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳನ್ನು ಶಿರಾ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.
ಘಟನೆ ಸಂಬಂಧ ಶಿರಾ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



