ಬೆಂಗಳೂರು: ಬೆಂಗಳೂರಿನ ಕೆ.ಆರ್.ಪುರಂ ಸಂಚಾರ ಠಾಣಾ ವ್ಯಾಪ್ತಿಯ ಮೇಡಹಳ್ಳಿ ಮೇಲ್ಸೇತುವೆ ಮೇಲೆ ಭೀಕರ ಅಪಘಾತ ಸಂಭವಿಸಿದೆ.
ನಿಂತಿದ್ದ ಈಚರ್ ವಾಹನಕ್ಕೆ ಗೂಡ್ಸ್ ಆಟೋ ಡಿಕ್ಕಿ ಹೊಡೆದ ಪರಿಣಾಮ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. ಮಣಿಕಂಠ, ಸುರೇಶ್, ಶ್ರೀನಿವಾಸ್ ಮೃತರು. ಇವರುಗಳು ವೈಟ್ ಫೀಲ್ಡ್ ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ.
ಕೋಲಾರದಿಂದ ಬೆಂಗಳೂರಿಗೆ ಆಲೂಗಡ್ಡೆ ತುಂಬಿಸಿಕೊಂಡು ಬರ್ತಿದ್ದ ಕ್ಯಾಂಟರ್ ಮೇಡಹಳ್ಳಿ ಮೇಲ್ಸೇತುವೆ ಮೇಲೆ ಟೈರ್ ಬ್ಲ್ಯಾಸ್ಟ್ ಆಗಿ ನಿಂತಿತ್ತು. ರಸ್ತೆ ಬದಿ ಕ್ಯಾಂಟರ್ ನಿಲ್ಲಿಸಿ ಚಾಲಕ ಟೈರ್ ಚೇಂಜ್ ಮಾಡುತ್ತಿದ್ದ. ಇದೇ ವೇಳೆ ನಿಂತಿದ್ದ ಕ್ಯಾಂಟರ್ಗೆ ಹಿಂದೆಯಿಂದ ಗೂಡ್ಸ್ ಆಟೋ ಡಿಕ್ಕಿಯಾಗಿದೆ. ಪರಿಣಾಮ ದುರಂತ ಸಂಭವಿಸಿದೆ.
ಸ್ಥಳಕ್ಕೆ ಡಿಸಿಪಿ ನೇಮಗೌಡ ಮತ್ತು ಕೆ.ಆರ್.ಪುರಂ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಕೆ.ಆರ್.ಪುರಂ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.



