ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 4 ವರ್ಷದ ಕಂದಮ್ಮ ಜೀವ ಕಳೆದುಕೊಂಡಿದೆ.
ಮೃತ ಬಾಲಕಿ ಗಬ್ಬೂರು ಗ್ರಾಮದ ವಿದ್ಯಾಶ್ರೀ (4) ಎಂದು ಗುರುತಿಸಲಾಗಿದೆ. ಗೂಗಲ್ನಿಂದ ದೇವದುರ್ಗಕ್ಕೆ ತೆರಳುತ್ತಿದ್ದ ಕೆಕೆಆರ್ಟಿಸಿ ಬಸ್, ಮದರಕಲ್ ಗ್ರಾಮ ಬಳಿ ಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ರಸ್ತೆ ದಾಟಲು ಮುಂದಾದ ಮಗು ಬಸ್ ಬರುವುದನ್ನು ಗಮನಿಸದೆ ಅಚಾನಕ್ಕಾಗಿ ಮುಂದೆ ಬಂದಿದೆ. ಈ ವೇಳೆ ನಿಯಂತ್ರಣ ತಪ್ಪಿದ ಬಸ್ ಚಕ್ರದಡಿಗೆ ಮಗು ಸಿಲುಕಿ ಗಂಭೀರ ಗಾಯಗೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದೆ.
ಘಟನೆಯ ನಂತರ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ರೋದನ ಕಣ್ಣೀರು ತರಿಸಿದೆ. ಪ್ರಕರಣ ಸಂಬಂಧ ಗಬ್ಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.



