ಗದಗ: ಗದಗ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗ ಹಾಗೂ ನಿರ್ಲಕ್ಷ್ಯ ಚಾಲನೆಯಿಂದ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿವೃತ್ತ ಅಂಗನವಾಡಿ ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ಗದಗ ತಾಲೂಕಿನ ಹುಲಕೋಟಿ ಗ್ರಾಮದ ಸಮೀಪ ಭಾನುವಾರ ನಡೆದಿದೆ.
ಮೃತರನ್ನು ಚುರ್ಚಿಹಾಳ ಗ್ರಾಮದ ಗಂಗವ್ವ ಕೋಂ ಕುಮಾರಸ್ವಾಮಿ ಹೊಂಬಾಳಿಮಠ (62) ಎಂದು ಗುರುತಿಸಲಾಗಿದೆ. ಅವರು ಅಂಗನವಾಡಿ ನಿವೃತ್ತ ಶಿಕ್ಷಕಿಯಾಗಿದ್ದು, ಗದಗದಲ್ಲಿರುವ ಎಲ್.ಐ.ಸಿ ಕಚೇರಿಗೆ ತೆರಳುವ ಉದ್ದೇಶದಿಂದ ಹೊರಟಿದ್ದರು.
ಹುಲಕೋಟಿ ಇಂಜಿನಿಯರಿಂಗ್ ಕಾಲೇಜ್ ಬಳಿ ರಸ್ತೆ ದಾಟುತ್ತಿದ್ದ ವೇಳೆ, ಗದಗದಿಂದ ಹುಬ್ಬಳ್ಳಿ ಕಡೆಗೆ ಅತಿವೇಗವಾಗಿ ಸಾಗುತ್ತಿದ್ದ ಕಾರು (ಕೆ.ಎ.26/ಎನ್.9326) ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ತಲೆಗೆ ಗಂಭೀರ ಗಾಯಗೊಂಡ ಗಂಗವ್ವ ಅವರನ್ನು ತಕ್ಷಣ ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ಆಸ್ಪತ್ರೆ ಪ್ರವೇಶ ದ್ವಾರದ ಬಳಿಯೇ ಕೊನೆಯುಸಿರೆಳೆದಿದ್ದಾರೆ.
ಅತಿವೇಗ ಹಾಗೂ ನಿರ್ಲಕ್ಷ್ಯ ಚಾಲನೆ ಆರೋಪದ ಮೇಲೆ ಕಾರು ಚಾಲಕ ಅಬ್ದುಲ್ ಗಫೂರ ವಿರುದ್ಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಸ್ಥಳೀಯರು ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ವೇಗ ನಿಯಂತ್ರಣ ಕ್ರಮಗಳನ್ನು ಕಠಿಣಗೊಳಿಸುವಂತೆ ಆಗ್ರಹಿಸಿದ್ದಾರೆ.



