ದಾವಣಗೆರೆ:- ಕುರ್ಚಿ ಉಳಿಸಿಕೊಳ್ಳಲು ಲಿಂಗಾಯತ ಸ್ವಾಮೀಜಿಗಳನ್ನ ಇಟ್ಟುಕೊಂಡು ಅಪ್ಪ-ಮಗ ಆಟ ಆಡ್ತಿದ್ದಾರೆ ಎಂದು ಶಾಸಕ ಬಿ.ಪಿ ಹರೀಶ್ ಅವರು ಬಿ ಎಸ್ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಬದಲಾವಣೆಯಾಗುವ ಲಕ್ಷಣ ಇದೆ. ಈ ಬಗ್ಗೆ ಭಯ ಇರುವ ಕಾರಣಕ್ಕೆ ಲಿಂಗಾಯತರ ಸಮಾವೇಶ ಮಾಡುತ್ತಿದ್ದಾರೆ. ಇದೆಲ್ಲ ಯಡಿಯೂರಪ್ಪ ಮತ್ತು ಅವರ ಮಕ್ಕಳ ಹಳೆಯ ಆಟಗಳು.
ಯಡಿಯೂರಪ್ಪ ಅವರನ್ನ ಸಿಎಂ ಕುರ್ಚಿಯಿಂದ ಕೆಳಗೆ ಇಳಿಸುವಾಗ ಲಿಂಗಾಯತ ಸ್ವಾಮೀಜಿಗಳನ್ನ ಇಟ್ಟುಕೊಂಡು ಆಟ ಆಡುತ್ತಿದ್ದರು. ಈಗ ಸಹ ಲಿಂಗಾಯತರ ಸಮಾವೇಶ ಮಾಡುತ್ತಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಬದಲಾವಣೆ ಆಗಲೇ ಬೇಕು. ಜೊತೆಗೆ ಪಕ್ಷ ವಿರೋಧಿಗಳು ಹಾಗೂ ಮ್ಯಾಚ್ ಫಿಕ್ಸರ್‍ಗಳಿಗೆ ಪಾಠ ಕಲಿಸಬೇಕು ಎಂದು ಪರೋಕ್ಷವಾಗಿ ಮಾಜಿ ಸಚಿವ ರೇಣುಕಾಚಾರ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯಡಿಯೂರಪ್ಪ ಮತ್ತು ವಿಜಯೇಂದ್ರ ಬಗ್ಗೆ ಪಕ್ಷದ ವರಿಷ್ಠರಿಗೆ ಹಾಗೂ ಸಂಸದರಿಗೆ ದೂರು ನೀಡಿದ್ದೇವೆ. ಅವರು ಸಹ ಇವರ ಬಗ್ಗೆ ನಮ್ಮ ಮುಂದೆ ಗುಣಗಾನ ಮಾಡಿದ್ದಾರೆ. ವಿಜಯೇಂದ್ರ ಜೊತೆ ಓಡಾಡುವ ಪಕ್ಷ ವಿರೋಧಿಗಳಿಗೆ ತಕ್ಕ ಪಾಠ ಆಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.