ಕೊಡಗು:- ಒಂದೇ ಬಾರಿ ಜಾಸ್ತಿ ಕಸ ಹಾಕಬೇಡಿ ಎಂದ ನಗರಸಭೆ ಸಿಬ್ಬಂದಿ ಮೇಲೆ ಅಪ್ಪ-ಮಗ ಇಬ್ಬರೂ ಸೇರಿ ಹಲ್ಲೆ ನಡೆಸಿರುವ ಘಟನೆ ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ನೌಷದ್ ಹಲ್ಲೆಗೊಳಗಾದ ಕಸದ ವಾಹನದ ಚಾಲಕ ಎಂದು ಗುರುತಿಸಲಾಗಿದೆ. ರಾಮಚಂದ್ರ ಮತ್ತು ಆತನ ಮಗನಿಂದ ಈ ಹಲ್ಲೆನಡೆದಿರುವುದಾಗಿ ತಿಳಿದು ಬಂದಿದೆ.
ಇನ್ನೂ ಗಾಯಾಳು ಚಾಲಕನನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೌದು, ಕಸ ತೆಗೆದುಕೊಂಡು ಹೋಗಲು ಕಸದ ವಾಹನ ಬಂದಿದ್ದ ವೇಳೆ ರಾಮಚಂದ್ರ ಮನೆಯವರು ನಾಲ್ಕೈದು ಚೀಲದಲ್ಲಿ ಕಸ ಹಾಕುತ್ತಿದ್ದರು. ಈ ವೇಳೆ ಚಾಲಕ ನೌಷಾದ್ ಅವರು, ಗಾಡಿ ತುಂಬಿದೆ ಈಗ ಅರ್ಧ ಕಸ ಹಾಕಿ. ಉಳಿದ ಅರ್ಧ ಕಸ ನಾಳೆ ಹಾಕಿ ಎಂದಿದ್ದಾರೆ.
ಇಷ್ಟಕ್ಕೆ ಕೋಪಗೊಂಡ ರಾಮಚಂದ್ರ, ಚಾಲಕನನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಅಪ್ಪ ರಾಮಚಂದ್ರನಿಗೆ ಮಗನೂ ಕೂಡ ಹಲ್ಲೆ ಮಾಡಲು ಸಾಥ್ ಕೊಟ್ಟಿದ್ದಾನೆ.
ಸರ್, ಹೊಡಿಬೇಡಿ ಎಂದು ಕೇಳಿಕೊಂಡರೂ ಬಿಡದೆ ಚಾಲಕ ನೌಷದ್ ಗೆ ಅಪ್ಪ-ಮಗ ಇಬ್ಬರೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಾನು ಯಾರು ಎಂದು ಗೊತ್ತೇನೋ ನಿನಗೆ ಎಂದು ಓಡಿಸಿಕೊಂಡು ಬಂದು ರಾಮಚಂದ್ರ ಹಲ್ಲೆ ಮಾಡಿದ್ದಾನೆ.
ಇನ್ನೂ ಹಲ್ಲೆ ಮಾಡಿದ್ದರಿಂದ ಕೋಪಗೊಂಡ ಚಾಲಕ, ರಾಮಚಂದ್ರ ಅವರ ಮನೆ ಬಾಗಿಲಿಗೆ ಕಸ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಅಲ್ಲದೇ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.