ಗದಗ: ಸ್ನಾನಕ್ಕಾಗಿ ನದಿಗೆ ಇಳಿದಿದ್ದ ಮಾವ ಹಾಗೂ ಅಳಿಯ ನೀರುಪಾಲಾದ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರಿನಲ್ಲಿ ಜರುಗಿದೆ.
ಮಲಪ್ರಭಾ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಗದಗ ನಗರದ ಮುಂಡರಗಿ ರಸ್ತೆಯ ಹೊಸ ಬಸ್ ನಿಲ್ದಾಣದ ಬಳಿ ಇರುವ 76ಪ್ಲಾಟ್ ನಿವಾಸಿ ಗಂಗಪ್ಪ ಕೊಡ್ಲಿ (37) ಹಾಗೂ ಕೊಪ್ಪಳದ ಗಾಂಧಿನಗರ ನಿವಾಸಿ ನಾಗರಾಜ್ ಮಾಳಗಿಮನಿ ನೀರುಪಾಲಾದವರು.
ಒಟ್ಟು ನಾಲ್ಕು ಜನ ಮಲಪ್ರಭಾ ನದಿಯಲ್ಲಿ ಸ್ನಾನಕ್ಕಾಗಿ ಇಳಿದಿದ್ದರು. ಅದರಲ್ಲಿ ಇಬ್ಬರು ಈಜಿ ದಡ ಸೇರಿದ್ದಾರೆ. ಆದರೆ ಇನ್ನಿಬ್ಬರು ನೀರಿನ ಸೆಳೆತದಿಂದ ಹೊರಗೆ ಬರಲು ಸಾಧ್ಯವಾಗದೇ ನೀರು ಪಾಲಾಗಿದ್ದಾರೆ.
ಮಲಪ್ರಭೆಗೆ ‘ಗಂಗಾಪೂಜೆ’ ಮಾಡಲು ಗದಗ ನಗರದಿಂದ ಬಂದಿದ್ದರು ಎನ್ನಲಾಗಿದೆ. ನೀರು ಪಾಲಾದವರಿಗಾಗಿ ಸ್ಥಳೀಯರ ಸಹಾಯದಿಂದ ಅಗ್ನಿಶಾಮಕ ದಳದವರು ಶೋಧ ಕಾರ್ಯ ನಡೆಸಿದರೂ ಸುಳಿವು ಸಿಕ್ಕಿಲ್ಲ. ಕತ್ತಲಾಗಿದ್ದರಿಂದ ಶೋಧ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲ ಮುಟ್ಟಿದೆ. ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.