ಮುಂಬೈ: ನಗರದ ಕೆಫೆ ಪರೇಡ್ ಪ್ರದೇಶದಲ್ಲಿ ಕಿವಿ ಕೇಳದ ಹಾಗೂ ಮಾತು ಬಾರದ 20 ವರ್ಷದ ಯುವತಿಯ ಮೇಲೆ ಆಕೆಯ ತಂದೆಯೇ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಡಿಎನ್ಎ ಪರೀಕ್ಷೆಯಲ್ಲಿ ಭ್ರೂಣದೊಂದಿಗೆ ತಂದೆಯ ಸಂಬಂಧ ದೃಢಪಟ್ಟ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಯುವತಿ ಐದು ತಿಂಗಳ ಗರ್ಭಿಣಿಯಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದುಬಂದಿದ್ದು, ಈ ಪ್ರಕರಣವು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆರಂಭದಲ್ಲಿ ಯುವತಿ ತನ್ನ ಮೇಲೆ ಮತ್ತೊಬ್ಬ ವ್ಯಕ್ತಿ ಹಾಗೂ 17 ವರ್ಷದ ಬಾಲಕ ಅತ್ಯಾಚಾರ ಎಸಗಿದ್ದಾರೆ ಎಂದು ಗುರುತಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆ ಇಬ್ಬರನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಇತರರ ಪಾತ್ರವಿದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಯುವತಿ ಕೈ ಸನ್ನೆಗಳ ಮೂಲಕ ತಾನು ಸುಸ್ತಾಗುತ್ತಿದೆ ಹಾಗೂ ಹೊಟ್ಟೆಯಲ್ಲಿ ಏನೋ ಚಲಿಸುವಂತೆ ಅನುಭವವಾಗುತ್ತಿದೆ ಎಂದು ಅಜ್ಜಿಗೆ ತಿಳಿಸಿದ್ದಳು. ಬಳಿಕ ಆಕೆಯನ್ನು ನಗರದ ಕ್ಯಾಮಾ ಮತ್ತು ಆಲ್ಬ್ಲೆಸ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ಪರೀಕ್ಷೆಯಲ್ಲಿ ಯುವತಿ ಐದು ತಿಂಗಳ ಗರ್ಭಿಣಿಯಾಗಿರುವುದು ದೃಢಪಟ್ಟಿತು. ಆಸ್ಪತ್ರೆ ಆಡಳಿತ ಮಂಡಳಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆ.
ಪೊಲೀಸರು ಈ ವಿಚಾರವನ್ನು ಯುವತಿಯ ತಂದೆಗೆ ತಿಳಿಸಿದಾಗ, ಪುತ್ರಿ ಗರ್ಭಿಣಿಯಾಗಿರುವುದನ್ನು ಆತ ತಳ್ಳಿಹಾಕಿದ್ದು, ದೂರು ದಾಖಲಿಸಲು ಸಹ ನಿರಾಕರಿಸಿದ್ದಾನೆ. ನಂತರ ಕೌನ್ಸಿಲಿಂಗ್ ನಡೆಸಿದ ಬಳಿಕ ಯುವತಿ ದೂರು ದಾಖಲಿಸಲು ಒಪ್ಪಿಕೊಂಡಳು.ಯುವತಿ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿ ತನಿಖೆ ನಡೆಸಿದರು.
ಬಳಿಕ ಯುವತಿಯ ತಂದೆ ಸೇರಿದಂತೆ ಒಟ್ಟು 17 ಶಂಕಿತರಿಂದ ಡಿಎನ್ಎ ಹಾಗೂ ರಕ್ತದ ಮಾದರಿಗಳನ್ನು ಸಂಗ್ರಹಿಸಿ, ಭ್ರೂಣದ ಆನುವಂಶಿಕ ದತ್ತಾಂಶದೊಂದಿಗೆ ಹೋಲಿಕೆ ನಡೆಸಲಾಯಿತು. ಈ ಪರೀಕ್ಷೆಯಲ್ಲಿ ಯುವತಿಯ ತಂದೆಯ ಡಿಎನ್ಎ ಮ್ಯಾಚ್ ಆಗಿರುವುದು ದೃಢಪಟ್ಟಿದೆ. ಡಿಎನ್ಎ ವರದಿ ಆಧಾರವಾಗಿ ಪೊಲೀಸರು ಯುವತಿಯ ತಂದೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.



