ನವದೆಹಲಿ: ದೆಹಲಿ ವಿಧಾನಸಭೆಯನ್ನು ಸ್ಫೋಟಿಸುವುದಾಗಿ ಇಮೇಲ್ ಮೂಲಕ ಮತ್ತೊಮ್ಮೆ ಬಾಂಬ್ ಬೆದರಿಕೆ ಬಂದಿದೆ. ಇದಕ್ಕೂ ಮುನ್ನ ಬಜೆಟ್ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿಯೂ ಇದೇ ರೀತಿಯ ಬೆದರಿಕೆ ಸಂದೇಶ ಬಂದಿತ್ತು. ಇಂದು ಬೆಳಗ್ಗೆ 8:14ರ ಸುಮಾರಿಗೆ ವಿಧಾನಸಭೆಗೆ ಸಂಬಂಧಿಸಿದ ಹಲವು ಸರ್ಕಾರಿ ಇಮೇಲ್ ಖಾತೆಗಳಿಗೆ ಈ ಬೆದರಿಕೆ ಸಂದೇಶ ರವಾನಿಸಲಾಗಿದೆ.
ಈ ಇಮೇಲ್ನಲ್ಲಿ ಯಾವುದೇ ಸಮಯದಲ್ಲಾದರೂ ವಿಧಾನಸಭೆ, ಸಚಿವಾಲಯ, ಕೆಲವು ಶಾಲೆಗಳು ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಸ್ಫೋಟ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಆದರೆ ಸ್ಫೋಟಕಗಳ ಸ್ವರೂಪ, ನಿಖರ ಸಮಯ ಅಥವಾ ಸ್ಥಳಗಳ ಕುರಿತು ಯಾವುದೇ ಸ್ಪಷ್ಟ ಮಾಹಿತಿ ನೀಡಲಾಗಿಲ್ಲ.
ಮಾಹಿತಿ ಲಭಿಸಿದ ತಕ್ಷಣ ದೆಹಲಿ ಪೊಲೀಸರು ತುರ್ತು ಕ್ರಮ ಕೈಗೊಂಡು, ಬಾಂಬ್ ನಿಷ್ಕ್ರೀಯ ದಳದೊಂದಿಗೆ ವಿಧಾನಸಭೆ, ಸಚಿವಾಲಯ, ಶಾಲೆಗಳು ಹಾಗೂ ಮೆಟ್ರೋ ನಿಲ್ದಾಣಗಳಲ್ಲಿ ಸಮಗ್ರ ತಪಾಸಣೆ ನಡೆಸಿದ್ದಾರೆ. ಈ ಘಟನೆ ಹಿನ್ನೆಲೆ ದೆಹಲಿಯ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.



