ಮಂಡ್ಯ:- ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಗ್ರಾಮದಲ್ಲಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇದೀಗ ಪತ್ನಿ ಮನೆಯವರ ಆರೋಪಕ್ಕೆ ಹೆದರಿ ಗಂಡನೂ ಸೂಸೈಡ್ ಮಾಡಿಕೊಂಡಿದ್ದಾನೆ.
ಪತ್ನಿಯ ಸಾವಿಗೆ ಹೆದರಿ 26 ವರ್ಷದ ಗಂಡ ಮೋಹನ್ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೆನ್ನೆ ರಾತ್ರಿ ಮೋಹನ್ ಮನೆಯಲ್ಲಿ ಪತ್ನಿ ಸ್ವಾತಿ ನೇಣು ಬಿಗಿದ ಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ಬಳಿಕ ಮನೆಯಿಂದ ಗಂಡ ಮೋಹನ್ ಹಾಗು ಆತನ ಪೋಷಕರು ನಾಪತ್ತೆ ಆಗಿದ್ದು, ಸಾಕಷ್ಟು ಅನುಮಾನ ಮೂಡಿತ್ತು.
ಅಲ್ಲದೇ ಮೃತ ಯುವತಿಯ ಪೋಷಕರು ಕೂಡ ಗಂಡ ಹಾಗು ಆತನ ಮನೆಯವರ ವಿರುದ್ಧ ಕೊಲೆ ಆರೋಪ ಮಾಡಿದ್ದರು. ಅಲ್ಲದೇ ರಾತ್ರಿ ಯುವತಿಯ ಸಂಬಂಧಿಕರಿಂದ ಗಂಡನ ಮನೆಗೆ ನುಗ್ಗಿ ಬೆಂಕಿ ಹಚ್ಚಿ ದಾಂಧಲೆ ಮಾಡಿದ್ದರು.
ಇದೆಲ್ಲದರಿಂದ ಹೆದರಿರುವ ಗಂಡ ಮೋಹನ್ ಇಂದು ಬೆಳಿಗ್ಗೆ ಕೆರೆಗೆ ಬಿದ್ದು ಸೂಸೈಡ್ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಕಿಕ್ಕೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಘೋರ ದುರಂತದಲ್ಲಿ ದಂಪತಿಯ ಬದುಕು ಅಂತ್ಯ ಕಂಡಿದ್ದು, ದಂಪತಿಯ ಸಾವಿನಿಂದ ಒಂದುವರೆ ವರ್ಷದ ಹೆಣ್ಣು ಮಗು ಅನಾಥವಾಗಿದೆ.