ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಡಾ. ಪಂ. ಪುಟ್ಟರಾಜ ರೈತ ಸಂಘದ 4ನೇ ವರ್ಷದ ವಾರ್ಷಿಕೋತ್ಸವವನ್ನು ಫೆಬ್ರವರಿ 9ರಂದು ಮುಂಜಾನೆ 10.30ಕ್ಕೆ ನಗರದ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಸಾನ್ನಿಧ್ಯವನ್ನು ವೀರೇಶ್ವರ ಪುಣ್ಯಾಶ್ರಮದ ಪರಮ ಪೂಜ್ಯ ಡಾ. ಕಲ್ಲಯ್ಯಜ್ಜನವರು, ತೋಂಟದಾರ್ಯ ಶ್ರೀಮಠದ ಜ. ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ ಎಂದು ಎಂ.ಪಿ. ಮುಳಗುಂದ ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 4ನೇ ವರ್ಷದ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದ್ದು, ಜಿಲ್ಲೆಯ 249ರ ಹಳ್ಳಿಯ 2024ರ ಪ್ರೌಢಶಾಲೆಯಲ್ಲಿ ಶೇ. 90ಕ್ಕೂ ಹೆಚ್ಚು ಅಂಕ ಪಡೆದು ಉತ್ತಿರ್ಣರಾದ ವಿದ್ಯಾರ್ಥಿಗಳಿಗೆ, 20 ರೈತರಿಗೆ, 20 ಕಲಾವಿದರಿಗೆ, 14 ಪೂಜ್ಯರನ್ನೊಳಗೊಂಡAತೆ ಅನೇಕ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ. ಪ್ರಶಸ್ತಿಗಳು ದುಡ್ಡು ಕೊಟ್ಟು ಕೊಂಡುಕೊಳ್ಳುವುದಲ್ಲ, ಪೂಜ್ಯರಿಂದ ಪ್ರಶಸ್ತಿ ಸ್ವೀಕರಿಸುವುದು ಒಂದು ದೊಡ್ಡ ಸಾಧನೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಡೂರು-ರಾಜೂರು-ಗದಗ ಬ್ರಹನ್ಮಠದ ಪೂಜ್ಯಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು, ಓಂಕಾರೇಶ್ವರ ಹಿರೇಮಠದ ಪೂಜ್ಯಶ್ರೀ ಫಕೀರೇಶ್ವರ ಶ್ರೀಗಳು, ಹೊಸಳ್ಳಿ ಸಂಸ್ಥಾನ ಮಠದ ಪೂಜ್ಯಶ್ರೀ ಜಗದ್ಗುರು ಅಭಿನವ ಬೂದೀಶ್ವರ ಶ್ರೀಗಳು, ಹರ್ಲಾಪುರ ಹಾಗೂ ಹಳ್ಳಿಗುಡಿಯ ಶ್ರೀಗುರು ಕೊಟ್ಟೂರೇಶ್ವರ ಮಠದ ಪೂಜ್ಯಶ್ರೀ ಅಭಿನವ ಡಾ. ಕೊಟ್ಟೂರೇಶ್ವರ ಶ್ರೀಗಳು, ನರಗುಂದ ಪುಣ್ಯಾರಣ್ಯ ಪತ್ರಿವನ ಮಠದ ಪೂಜ್ಯಶ್ರೀ ಡಾ. ಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಶ್ರೀಗಳು, ಸದ್ಗುರು ಮುಕ್ಕಣೇಶ್ವರ ಶ್ರೀಮಠದ ಪೂಜ್ಯಶ್ರೀ ಶಂಕರಾನಂದ ಸ್ವಾಮಿಗಳು ಸೇರಿದಂತೆ ಅನೇಕ ಪೂಜ್ಯರು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ, ಗಂಗಾವತಿಯ ಶಾಸಕ ಜಿ. ಜನಾರ್ದನ ರೆಡ್ಡಿ, ನರಗುಂದ ಶಾಸಕ ಸಿ.ಸಿ. ಪಾಟೀಲ, ರೋಣ ಶಾಸಕ ಜಿ.ಎಸ್. ಪಾಟೀಲ, ಅಥಣಿ ಶಾಸಕ ಲಕ್ಷ್ಮಣ ಆಗಮಿಸಲಿದ್ದು, ವಿಶೇಷ ಅತಿಥಿಗಳಾಗಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಮಾಜಿ ಸಚಿವ ಬಿ. ಶ್ರೀರಾಮುಲು, ಮಾಜಿ ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಜಿ.ಎಸ್. ಗಡ್ಡದೇವರಮಠ, ಬಿ.ಆರ್. ಯಾವಗಲ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಗಣ್ಯರಾದ ಶಿವಕುಮಾರ ರಾಮನಕೊಪ್ಪ ಮುಂತಾದವರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ, ಕೃಷಿ ಎಂದರೆ ಋಷಿ ಇದ್ದಂತೆ, ರೈತ ದೇಶದ ಬೆನ್ನೆಲುಬು ಎಂದು ಬಣ್ಣಿಸಲಾಗಿದೆ. ಆದರೆ, ಇಂದು ರೈತ ಸಂಕಷ್ಟದ ಸ್ಥಿತಿಯಲ್ಲಿದ್ದು, ಸಂಕಷ್ಟದಲ್ಲಿರುವ ರೈತನ ಸಮಸ್ಯೆಗಳಿಗೆ ಡಾ. ಪಂ. ಪುಟ್ಟರಾಜ ರೈತ ಸಂಘ ಬೆನ್ನೆಲುಬಾಗಿ ನಿಂತು ಅನೇಕ ರೈತಪರ ಹೋರಾಟ ಮಾಡುತ್ತಾ ಬಂದಿದೆ. ಈ ಸಂಘವು ರೈತರ ಪರವಾಗಿ ಇನ್ನೂ ಹೆಚ್ಚು ಹೋರಾಟ ಮಾಡಲಿ.
-ಫಕ್ಕಿರೇಶ್ವರ ಶ್ರೀಗಳು.
ಓಂಕಾರೇಶ್ವರ ಹಿರೇಮಠ.