ಫೆ. 21ರಿಂದ 8ನೇ ವರ್ಷದ ಸಂಗೀತ, ನೃತ್ಯ, ಚಿತ್ರ ಸಂಭ್ರಮಗಳ `ಪುಲಿಗೆರೆ ಉತ್ಸವ’

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ಹಾಗೂ ಭಾರತೀಯ ವಿದ್ಯಾಭವನದ ಆಶ್ರಯದಲ್ಲಿ ಕಳೆದ 7 ವರ್ಷಗಳಿಂದ ಪುಲಿಗೆರೆ ಉತ್ಸವ ನಡೆಸುತ್ತಾ ಬರಲಾಗಿದ್ದು, ಈ ವರ್ಷವೂ ಫೆ. 21, 22 ಮತ್ತು 23ರಂದು 8ನೇ ವರ್ಷದ ಸಂಗೀತ, ನೃತ್ಯ, ಚಿತ್ರ ಸಂಭ್ರಮಗಳ `ಪುಲಿಗೆರೆ ಉತ್ಸವ’ದ ಸಾಂಸ್ಕೃತಿಕ ಮೆರುಗು ಮೇಳೈಸಲಿದೆ ಎಂದು ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮಿ ಕೆ.ರಾವ್ ಹೇಳಿದರು.

Advertisement

ಅವರು ಬುಧವಾರ ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಶ್ರೀ ಸೋಮೆಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಮತ್ತು ಹಿರಿಯರ ಸಮ್ಮುಖದಲ್ಲಿ ನಡೆದ ಪ್ರತಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಐತಿಹಾಸಿಕ ಪ್ರಸಿದ್ಧ ಸೋಮೇಶ್ವರ ದೇವಸ್ಥಾನವನ್ನು ಇನ್ಫೋಸಿಸ್ ಒಡತಿ ಡಾ.ಸುಧಾಮೂರ್ತಿಯರು ತಮ್ಮ ಪ್ರತಿಷ್ಠಾನದಿಂದ 5 ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿದ್ದಾರೆ. ಬಳಿಕ ದೇವಸ್ಥಾನದಲ್ಲಿ ಸಂಗೀತ, ನೃತ್ಯ, ಇತಿಹಾಸ ಹೀಗೆ ಸಾಂಸ್ಕೃತಿಕ ಪರಂಪರೆ ಮುಂದುವರೆಯಬೇಕು ಎಂಬ ಉದ್ದೇಶದಿಂದ ತಮ್ಮದೇ ಪ್ರತಿಷ್ಠಾನದಿಂದ ಲಕ್ಷಾಂತರ ರೂ ಖರ್ಚು ಮಾಡಿ ಪ್ರತಿ ವರ್ಷ 3 ದಿನಗಳ ಕಾಲ ಪುಲಿಗೆರೆ ಉತ್ಸವ ಕಾರ್ಯಕ್ರಮ ನಡೆಸುತ್ತಿದ್ದಾರೆ. ದೇಶದ ಪ್ರಸಿದ್ಧ ಸಂಗೀತಕಾರರು, ನೃತ್ಯಪಟುಗಳು, ಚಿತ್ರಕಲಾವಿದರಿಂದ ಸಂಗೀತದ ರಸದೌತಣ ನೀಡುವ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಭಾರತೀಯ ವಿದ್ಯಾಭವನದಿಂದ ಬೆಂಗಳೂರು ಹೊರತುಪಡಿಸಿದರೆ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ನಡೆಯುತ್ತಿರುವದು ಲಕ್ಷ್ಮೇಶ್ವರದ ಪುಲಿಗೆರೆ ಉತ್ಸವ ಮಾತ್ರ. ಈ ಕಾರ್ಯಕ್ರಮಕ್ಕೆ ಈ ಭಾಗದ ಎಲ್ಲರ ಸಹಕಾರ ಅಗತ್ಯವಾಗಿದೆ. ಫೆ.21ರಂದು ಬೆಳಿಗ್ಗೆ 6 ಗಂಟೆಗೆ ಪುಲಿಗೆರೆ ಉತ್ಸವ ಕಾರ್ಯಕ್ರಮವನ್ನು ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ನ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮೀ ಕೆ.ರಾವ್ ಅವರು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಇನ್ಫೋಸಿಸ್ ಪ್ರತಿಷ್ಠಾನದ ಸಿಎಸ್‌ಆರ್ ವಿಭಾಗದ ವ್ಯವಸ್ಥಾಪಕರಾದ ಪ್ರಶಾಂತ ಹೆಗಡೆ ಮತ್ತಿತರರು ಆಗಮಿಸುವರು. ಸಂಜೆ 4ಕ್ಕೆ ಸೋಮೇಶ್ವರನ ಪಲ್ಲಕ್ಕಿ ಉತ್ಸವ ನೆರವೇರಲಿದೆ. 3 ದಿನಗಳ ಕಾಲ ನಿತ್ಯ ಬೆಳಿಗ್ಗೆ 6ರಿಂದ 8 ಗಂಟೆವರೆಗೆ ಉದಯರಾಗದ ಕಾರ್ಯಕ್ರಮಗಳು ಮತ್ತು ಸಂಜೆ 6ರಿಂದ 9.30ರವರೆಗೆ ಸಂಧ್ಯಾರಾಗದ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ವಿ.ಎಲ್. ಪೂಜಾರ, ಎಮ್.ಆರ್. ಪಾಟೀಲ, ಬಸವರಾಜ ಬೆಂಡಿಗೇರಿ, ವಿರೂಪಾಕ್ಷಪ್ಪ ಪಡಗೇರಿ, ಬಸವೇಶ ಮಹಾಂತಶೆಟ್ಟರ, ಎನ್.ಆರ್. ಸಾತಪುತೆ, ಗುರಣ್ಣ ಪಾಟೀಲಕುಲಕರ್ಣಿ, ಬಸವರಾಜ ಬಾಳಿಕಾಯಿ, ಸೋಮಶೇಖರ ಕೇರಿಮನಿ, ನಿಂಗಪ್ಪ ತಹಸೀಲ್ದಾರ, ಮಯೂರಗೌಡ ಪಾಟೀಲ, ನಿಂಗಪ್ಪ ಗೊರವರ, ಮಹೇಶ ಹೊಗೆಸೊಪ್ಪಿನ, ಮಾಲಾದೇವಿ ದಂದರಗಿ, ಗೀತಾ ಮಾನ್ವಿ, ಪೂರ್ಣಾಜಿ ಕರಾಟೆ, ಬಿ.ಎಸ್. ಬಾಳೇಶ್ವರಮಠ, ಈಶ್ವರ ಮೇಡ್ಲೇರಿ ಮುಂತಾದವರು ಉಪಸ್ಥಿತರಿದ್ದರು.

ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ ಮತ್ತು ಜಿ.ಎಂ. ಮಹಾಂತಶೆಟ್ಟರ ಮಾತನಾಡಿ, ಪುರಾತನ ಇತಿಹಾಸ ಹಾಗೂ ಪರಂಪರೆಗೆ ಹೆಸರಾದ ದೇವಸ್ಥಾನವನ್ನು ಡಾ.ಸುಧಾ ನಾರಾಯಣಮೂರ್ತಿಯವರು ಕೋಟ್ಯಾಂತರ ರೂ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿ, ದೇವಸ್ಥಾನಕ್ಕೆ ಗತವೈಭವದ ಮೆರಗು ತಂದುಕೊಡಲು ಪ್ರತಿವರ್ಷ ಪುಲಿಗೆರೆ ಉತ್ಸವ ಹೆಸರಿನಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ನಮಗೆಲ್ಲ ಹೆಮ್ಮೆ. ಈ ವರ್ಷವೂ ಪುಲಿಗೆರೆ ಉತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವದ ಕಳೆ ಹೆಚ್ಚಿಸೋಣ ಮತ್ತು ಅಗತ್ಯ ಸಹಕಾರ ನೀಡೋಣ ಎಂದರು.


Spread the love

LEAVE A REPLY

Please enter your comment!
Please enter your name here