ಫೆ.2ರಂದು ‘ಅಮರಸ್ವರ ಸಮಾರೋಹ’

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಉತ್ತರದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ದಕ್ಷಿಣಕ್ಕೆ ತಂದ, ಅರಮನೆಯ ಸಂಗೀತಕ್ಕೆ ಗುರು ಮನೆಯ ಗೌರವವನ್ನು ದೊರಕಿಸಿಕೊಟ್ಟ, ವಚನ ಸಾಹಿತ್ಯವನ್ನು ಮೊಟ್ಟಮೊದಲಿಗೆ ಸಂಗೀತಕ್ಕೆ ಅಳವಡಿಸಿ ಹಾಡಿದ, ಗದುಗನ್ನು ಸಂಗೀತದ ಗದ್ದಿಗೆಯನ್ನಾಗಿ ಮಾಡಿದ, ಪಂಡಿತ ಪಂಚಾಕ್ಷರಿ ಗವಾಯಿಗಳವರ ಜಯಂತ್ಯುತ್ಸವವು, ಗದುಗಿನ ಕಲಾ ವಿಕಾಸ ಪರಿಷತ್ ವತಿಯಿಂದ ಧಾರವಾಡದ ಡಾ. ದ.ರಾ. ಬೇಂದ್ರೆ ಭವನದಲ್ಲಿ ಫೆಬ್ರವರಿ 2ರಂದು ಹಮ್ಮಿಕೊಂಡಿದೆ.

Advertisement

ಬೆಳಿಗ್ಗೆ 10-30ರಿಂದ ರಾತ್ರಿ 8 ಗಂಟೆಯವರೆಗೆ ನಡೆಯುವ ಒಂದು ದಿನದ ಈ ಸಮಾರೋಹದ ಉದ್ಘಾಟನೆಯನ್ನು, ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕರಾದ ಡಾ. ಶಾಂತಾರಾಮ ಹೆಗಡೆ ನೆರವೇರಿಸಲಿದ್ದಾರೆ. ಧಾರವಾಡದ ಹಿರಿಯ ರಂಗಕರ್ಮಿ ಡಾ. ಶಶಿಧರ ನರೇಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಧಾರವಾಡದ ಶ್ರೀ ಸಾಯಿ ಪ.ಪೂ ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾಲಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕರಾದ ಡಾ. ವೀಣಾ ಬಿರಾದಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಲಾ ವಿಕಾಸ್ ಪರಿಷತ್ ಸಂಸ್ಥಾಪಕ ಸಿ.ಕೆ.ಹೆಚ್. ಶಾಸ್ತ್ರೀ (ಕಡಣಿ) ಪ್ರಾಸ್ತಾವಿಕವಾಗಿ ಮಾತನಾಡುವರು.

ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಮಹಿಳಾ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ, ಸಂಗೀತ ಶಿಕ್ಷಕಿ ದೇವಿಕಾ ಕೆ.ಜೋಗಿ ಸ್ವಾಗತ ಮಾಡುವರು. ಸ್ವರ ಸಂವಾದಿನಿ ಸಂಗೀತ ಪಾಠಶಾಲೆಯ ಮಕ್ಕಳು ಪ್ರಾರ್ಥನಾ ಸಂಗೀತ ನಡೆಸಿಕೊಡುವರು. ಐಶ್ವರ್ಯ-ಅಮೂಲ್ಯ ಹಡಪದ ಸಹೋದರಿಯರು ಸ್ವಾಗತ ನೃತ್ಯ ಸೇವೆ ಸಲ್ಲಿಸುವರು. ಅಳ್ನಾವರದ ಸರಕಾರಿ ಪ್ರಥಮದರ್ಜೆ ಕಾಲೇಜನ ಸಹಾಯಕ ಪ್ರಾಧ್ಯಾಪಕ ಪ್ರೊ. ಪಿ.ಆರ್. ನಾಗರಾಳ ನಿರೂಪಣೆ ಮಾಡುವರು.

ಇದೇ ಸಂದರ್ಭದಲ್ಲಿ, ಕಲಾ ವಿಕಾಸ ಪರಿಷತ್‌ನ 2023-24ನೇ ಸಾಲಿನ ವಾರ್ಷಿಕ ಪ್ರಶಸ್ತಿ ‘ಗಾನಯೋಗಿ ಪಂಚಾಕ್ಷರಿ ಅನುಗ್ರಹ’ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಖ್ಯಾತ ತಬಲಾ ವಾದಕ, ಧಾರವಾಡ ಆಕಾಶವಾಣಿ ನಿಲಯದ ಕಲಾವಿದ ಕಲಬುರ್ಗಿಯ ಪಂ. ಶಾಂತಲಿಂಗಪ್ಪ ಹೂಗಾರ (ದೇಸಾಯಿ ಕಲ್ಲೂರ) ಇವರಿಗೆ, ಹಾಗೂ ಧಾರವಾಡದ ಪ್ರತಿಷ್ಠಿತ ಕಲಾ ಪೋಷಕ ಸಂಸ್ಥೆಯಾದ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಮತ್ತು ಶಿರಸಿಯ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಮಂಡಳಿ `ಯಕ್ಷ ಕಲಾಸಂಗಮ’ ಕಲಾ ಪೋಷಕ ಮತ್ತು ಕಲಾ ಶಿಕ್ಷಣ ಸಂಸ್ಥೆಗಳಿಗೆ ಪ್ರದಾನಿಸಲಾಗುವುದು.

ಉದ್ಘಾಟನಾ ಸಮಾರಂಭದ ನಂತರ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಧಾರವಾಡದ ನಿವೃತ್ತ ಶಿಕ್ಷಕಿ ಮಹಾದೇವಿ ಕೊಪ್ಪದ ಪ್ರಸಾದ ದಾಸೋಹ ಭಕ್ತಿಸೇವೆ ವಹಿಸಿಕೊಂಡಿದ್ದಾರೆ.

ಸAಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಲಾ ವಿಕಾಸ ಪರಿಷತ್ ಸಂಸ್ಥಾಪಕ ಸಿ.ಕೆ.ಹೆಚ್. ಶಾಸ್ತ್ರೀ (ಕಡಣಿ) ವಹಿಸಿಕೊಳ್ಳುವರು. ಖ್ಯಾತ ಸಾಹಿತಿಗಳು, ಆಕಾಶವಾಣಿ ಧಾರವಾಡ ಕೇಂದ್ರದ ನಿವೃತ್ತ ನಿರ್ದೇಶಕ ಬಸು ಬೇವಿನಗಿಡದ, ಹಿರಿಯ ರಂಗ ನಿರ್ದೇಶಕಿ, ಗಾಯಕಿ ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠ, ಸಾಹಿತಿ-ಕಲಾವಿದ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಲಲಿತಕಲಾ ಹಾಗೂ ಸಂಗೀತ ಮಾಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎ.ಎಲ್. ದೇಸಾಯಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಶಿಕ್ಷಕ, ಸಾಹಿತಿ ಬಸವರಾಜ ಹಡಪದ ಸ್ವಾಗತ ಭಾಷಣ ಮಾಡಲಿದ್ದಾರೆ. ಕವಿಯತ್ರಿ ಸುಮಂಗಲಾ ಚಕ್ರಸಾಲಿ ಹಳಿಯಾಳ ನಿರೂಪಣೆ ಮಾಡುವರು. ಆಮಂತ್ರಿತ ಆಹ್ವಾನಿತ ಮತ್ತು ಪ್ರಶಸ್ತಿ ಪುರಸ್ಕೃತ ಕಲಾವಿದರಿಂದ ದಿನಪೂರ್ತಿ ಸಂಗೀತ-ನೃತ್ಯ-ಕಲಾ ಪ್ರದರ್ಶನ ಆಯೋಜಿಸಲಾಗಿದೆ. ಆಸಕ್ತ ಸಂಗೀತ ಮತ್ತು ನೃತ್ಯ ಶಾಲೆಯ ಮಕ್ಕಳು ಭಾಗವಹಿಸಬಹುದಾಗಿದೆ ಮತ್ತು ತನು-ಮನ-ಧನದ ಭಕ್ತಿ ಸೇವೆ ಸಲ್ಲಿಸಿ ಗುರು ಕೃಪೆಗೆ ಪಾತ್ರರಾಗಬೇಕೆಂದು ಕಲಾ ವಿಕಾಸ ಪರಿಷತ್ ಸಂಸ್ಥಾಪಕ ಸಿ.ಕೆ.ಹೆಚ್. ಶಾಸ್ತ್ರೀ (ಕಡಣಿ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕರಾದ, ಬೆಂಗಳೂರಿನ ಡಾ. ಗೋಪಾಲ ಕೆ. ರಾಯಚೂರ, ಧಾರವಾಡದ ಡಾ. ಪರಶುರಾಮ ಕಟ್ಟಿಸಂಗಾವಿ, ಆಕಾಶವಾಣಿ ಮತ್ತು ದೂರದರ್ಶನ ಸುಗಮ ಸಂಗೀತ ಕಲಾವಿದೆ ಸುಮಾ ಹಡಪದ, ಯುವ ಕಲಾವಿದ, ಸಂಗೀತ ಶಿಕ್ಷಕ ಗದಗ ಜಿಲ್ಲೆಯ ಡಂಬಳದ ಬಸವರಾಜ ಎನ್.ಸಿದ್ದಣ್ಣನವರ ಮತ್ತು ಸಂಗೀತ ನೃತ್ಯ ಕಲಾ ಶಿಕ್ಷಣ ಸಂಸ್ಥೆಗಳಾದ ಜ್ಞಾನ ಜ್ಯೋತಿ ಕಲಾ ಬಳಗ-ಹುಬ್ಬಳ್ಳಿ, ಶ್ರೀ ರಾಜರಾಜೇಶ್ವರಿ ಸಂಗೀತ ಕಲಾ ಪಾಠ ಶಾಲೆ-ಇಟ್ಟಿಗಿ, ಸುಸ್ವರ ಸಂಗೀತ ವಿದ್ಯಾ ಸಂಸ್ಥೆ-ದಾAಡೇಲಿ, ಶ್ರೀ ದುರ್ಗಾದೇವಿ ನಾಟ್ಯ ಶಾಲೆ-ಹಳಿಯಾಳ ಇವರುಗಳಿಗೆ ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ‘ಸುವರ್ಣ ಸಿರಿ ಸಮ್ಮಾನ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

 


Spread the love

LEAVE A REPLY

Please enter your comment!
Please enter your name here