ಗದಗ: ಯೂರಿಯಾ ಗೊಬ್ಬರಕ್ಕಾಗಿ ಜಿಲ್ಲೆಯ ರೈತರು ನಡೆಸುತ್ತಿರುವ ಪರದಾಟ, ಗೋಳಾಟ ನಿಜಕ್ಕೂ ಹೇಳತ್ತೀರದ್ದಾಗಿದೆ.
ನಿದ್ದೆ ಇಲ್ಲದೇ, ಊಟ ಇಲ್ಲದೇ ಮನೆ ಮಠ ಬಿಟ್ಟು ಗೊಬ್ಬರಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ರೈತರ ಈ ಸ್ಥಿತಿ ನಿಜಕ್ಕೂ ಮನಕಲಕುವಂತಿದೆ. ಎಸ್, ಯೂರಿಯಾ ಗೊಬ್ಬರಕ್ಕಾಗಿ ಪರದಾಟ ನಡೆಸಿರುವ ರೈತರು, ಮಳೆ-ಚಳಿ ಎನ್ನದೇ ಗೊಬ್ಬರದ ಅಂಗಡಿಗಳ ಮುಂದೆ ವಾಸ್ತವ್ಯ ಹೂಡುತ್ತಿದ್ದಾರೆ. ಈ ದೃಶ್ಯ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಂಡುಬಂದಿದೆ.
ಮುಂಜಾನೆ ಬೇಗ ಗೊಬ್ಬರ ಸಿಗಲಿ ಎಂದು ರಾತ್ರಿ ಅಲ್ಲೇ ವಾಸ್ತವ್ಯ ಹೂಡುತ್ತಿದ್ದು, ಲಕ್ಷ್ಮೇಶ್ವರ ತಾಲೂಕಿನ ಚನ್ನಪಟ್ಟಣ, ಹಾಗೂ ಮುನಿಯನತಾಂಡೆ ಹಾಗೂ ಸ್ಥಳೀಯ ರೈತರು, ಗೊಬ್ಬರಕ್ಕಾಗಿ ಇನ್ನಿಲ್ಲದ ಪರದಾಟ ನಡೆಸಿದ್ದಾರೆ. ಜಿಟಿ ಜಿಟಿ ಮಳೆಯಲ್ಲೂ ಹಲವೆಡೆ ಸರದಿ ಸಾಲಿನಲ್ಲಿ ನಿಂತು ಕಾದಿದ್ದಾರೆ. ಕೆಲ ರೈತರಿಗೆ ಎರಡು ಮೂರು ಚೀಲ ಮಾತ್ರ ಗೊಬ್ಬರ ದೊರೆತರೆ, ಇನ್ನೂ ಕೆಲ ರೈತರಿಗೆ ಸಿಕ್ಕಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ನೀಡುವಂತೆ ಅನ್ನದಾತರು ಒತ್ತಾಯ ಮಾಡಿದ್ದಾರೆ.
ಅತಿಯಾದ ಮಳೆಯಿಂದ ತೇವಾಂಶ ಹೆಚ್ಚಾಗಿ ಬೆಳೆಗಳು ರೋಗಕ್ಕೆ ತುತ್ತಾಗುತ್ತಿದ್ದು, ಬೆಳೆಗಳು ನಾಶವಾಗುತ್ತದೆ ಎಂಬ ಆತಂಕದಲ್ಲಿ ರೈತರಿದ್ದಾರೆ. ಯೂರಿಯಾ ಗೊಬ್ಬರ ಬಳಸಿದರೆ ಬೆಳೆ ಉಳಿಸಿಕೊಳ್ಳಬಹುದು ಎಂಬುದು ರೈತರ ಆಲೋಚನೆ. ಹೀಗಾಗಿ ಯೂರಿಯಾ ಗೊಬ್ಬರಕ್ಕೆ ಮುಗಿಬಿದ್ದಿದ್ದಾರೆ.
ಇನ್ನೂ ಗದಗ ನಗರದ ನಾಮಜೋಶಿ ರಸ್ತೆಯಲ್ಲಿನ ಗೊಬ್ಬರದ ಅಂಗಡಿಯಲ್ಲಿ ಮುಂಜಾನೆಯಿಂದಲೇ ಅನ್ನದಾತರು ಸರತಿಸಾಲಿನಲ್ಲಿ ನಿಂತಿರುವ ದೃಶ್ಯ ಸೆರೆಯಾಗಿದೆ. ಅದರಲ್ಲೂ ಕೇವಲ 150 ರೈತರಿಗೆ ಮಾತ್ರ ಕೋಪನ್ ನೀಡಿದ್ದಾರೆ. ಅವರಿಗೆ ಅಷ್ಟೇ ಗೊಬ್ಬರ ನೀಡ್ತಾರೆ, ಉಳಿದವರು ವಾಪಸ್ಸ್ ಹೋಗಬೇಕು. ಮಕ್ಕಳು, ಮಹಿಳೆಯರು, ಸೇರಿದಂತೆ ಇಡೀ ರೈತ ಕುಟುಂಬಗಳು ಸರತಿಸಾಲಿನಲ್ಲಿ ಕ್ಯೂ ನಿಂತು ಗೊಬ್ಬರಕ್ಕಾಗಿ ಪರದಾಟ ನಡೆಸಿದ್ದಾರೆ. ಅಷ್ಟೇ ಅಲ್ಲ ಹೆಚ್ಚಿನ ಹಣ ಪಡೆದು ಸಮರ್ಪಕವಾಗಿ ಯೂರಿಯಾ ಗೊಬ್ಬರ ಮಾರಾಟ ಮಾಡುತ್ತಿದ್ದು, ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಅನ್ನದಾತರು ತಮ್ಮ ಆಳಲು ತೋಡಿಕೊಂಡಿದ್ದಾರೆ. ಹಾಗೂ ಇಷ್ಟೆಲ್ಲಾ ಪರದಾಟ ನಡೆಸುತ್ತಿರುವ ರೈತರ ಸ್ಥಿತಿ ಕಂಡು ಕುಂಭಕರ್ಣ ನಿದ್ದೆಗೆ ಜಾರಿರುವ ಗದಗ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದಾರೆ.
ಅಲ್ಲದೇ ಸರ್ಕಾರ ಸಮರ್ಪಕವಾಗಿ ಯೂರಿಯಾ ಗೊಬ್ಬರ ವಿತರಣೆ ಮಾಡ್ಬೇಕು ಎಂದು ಒತ್ತಾಯ ಮಾಡಿದ್ದಾರೆ. ಇನ್ನೂ ರೋಗ ನಿಯಂತ್ರಣಕ್ಕೆ ಯೂರಿಯಾ ಗೊಬ್ಬರ ನೀಡುವುದು ರೈತರು ಅನುಸರಿಸುವ ವಿಧಾನ. ಆದರೆ ಕೃಷಿ ಇಲಾಖೆ ನ್ಯಾನೂ ಯೂರಿಯಾ ಬಳಸಿ ಎಂದು ಸಲಹೆ ನೀಡಿದೆ. ಬೆಳೆಗಳು ಎತ್ತರಕ್ಕೆ ಬೆಳೆದಿದ್ದು, ನ್ಯಾನೂ ಯೂರಿಯಾ ಸಿಂಪಡಣೆ ಮಾಡಲು ಸಾಧ್ಯವಾಗುತ್ತಿಲ್ಲ. ಕೃಷಿ ಇಲಾಖೆ ಯೂರಿಯಾ ಗೊಬ್ಬರವನ್ನು ಸಮರ್ಪಕವಾಗಿ ಪೂರೈಕೆ ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ.