ಬೆಂಗಳೂರು: ಹೆಣ್ಣು ಭ್ರೂಣ ಹತ್ಯೆ ಕೇವಲ ಕಾನೂನುಬಾಹಿರ ಅಪರಾಧವಷ್ಟೇ ಅಲ್ಲ, ನೈತಿಕ ಸಮಾಜದ ಮೇಲೆ ಬಿದ್ದ ಕಳಂಕವಾಗಿದ್ದು, ಸಂವಿಧಾನಾತ್ಮಕ ಮೌಲ್ಯಗಳಿಗೆ ಅವಮಾನವಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಲಿಂಗ ಪರೀಕ್ಷೆ ನಡೆಸಿ ಗರ್ಭಪಾತ ಮಾಡಿಸಿದ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿದೆ.
ಈ ಸಂಬಂಧ ಆರೋಪಿಗಳಾಗಿದ್ದ ಶಾರದಮ್ಮ, ಅವರ ಪತಿ ದಾಸೇಗೌಡ ಹಾಗೂ ಡಾ. ಶಶಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿ ತಿರಸ್ಕರಿಸಿದೆ.
ಪ್ರಕರಣ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಲ್ಲಿಸಿದ್ದ ದೂರಿನಲ್ಲಿ ಘಟನೆಗಳ ವಿವರ ಸ್ಪಷ್ಟವಾಗಿ ನೀಡಲಾಗಿದೆ. ದೂರಿನಲ್ಲಿ ಯಾವುದೇ ಅಸ್ಪಷ್ಟತೆ ಇಲ್ಲದೆ ಗಂಭೀರ ಆರೋಪಗಳನ್ನು ಒಳಗೊಂಡಿದೆ ಎಂದು ನ್ಯಾಯಪೀಠ ಹೇಳಿದೆ.
ಇಂತಹ ಗಂಭೀರ ಪ್ರಕರಣಗಳಲ್ಲಿ ಆರಂಭದಲ್ಲೇ ಸಡಿಲಿಕೆ ನೀಡಿದರೆ ಕಾನೂನಿನ ಮಹತ್ವ ಕುಂದುತ್ತದೆ ಹಾಗೂ ಲಿಂಗಭೇದದ ಅಪರಾಧಗಳಿಗೆ ಉತ್ತೇಜನ ಸಿಗುವ ಸಾಧ್ಯತೆ ಇದೆ. ಆದ್ದರಿಂದ ಈ ಹಂತದಲ್ಲಿ ಪ್ರಕರಣವನ್ನು ರದ್ದುಪಡಿಸುವುದು ಸೂಕ್ತವಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ:
ಚನ್ನಪಟ್ಟಣ ತಾಲೂಕಿನ ಚನ್ನಕೇಶವ ಅವರ ಪತ್ನಿ ಹರ್ಷಿತಾ ಮೂರನೇ ಮಗುವಿಗೆ ಗರ್ಭಿಣಿಯಾಗಿದ್ದರು. ಅವರಿಗೆ ಈಗಾಗಲೇ ಇಬ್ಬರು ಹೆಣ್ಣುಮಕ್ಕಳು ಇದ್ದ ಹಿನ್ನೆಲೆಯಲ್ಲಿ ಗರ್ಭದಲ್ಲಿರುವ ಮಗುವಿನ ಲಿಂಗ ತಿಳಿದುಕೊಳ್ಳಲು ಅವರು ಯತ್ನಿಸಿದ್ದರು.
ಈ ಹಿನ್ನೆಲೆಯಲ್ಲಿ ಸಂಬಂಧಿಕರಾದ ಶಾರದಮ್ಮ ಮತ್ತು ದಾಸೇಗೌಡ ಅವರ ಸಹಾಯದಿಂದ ಜಿಲ್ಲಾಸ್ಪತ್ರೆಯ ವೈದ್ಯರಾದ ಡಾ. ಶಶಿ ಮೂಲಕ ಅಕ್ರಮವಾಗಿ ಸ್ಕ್ಯಾನಿಂಗ್ ನಡೆಸಿ ಭ್ರೂಣದ ಲಿಂಗ ಪತ್ತೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ನಂತರ ಖಾಸಗಿ ಕ್ಲಿನಿಕ್‌ನಲ್ಲಿ ಗರ್ಭಪಾತಕ್ಕೆ ಔಷಧಿ ನೀಡಲಾಗಿದ್ದು, ಆ ರಾತ್ರಿ ಹರ್ಷಿತಾಗೆ ತೀವ್ರ ರಕ್ತಸ್ರಾವ ಉಂಟಾಗಿ ಭ್ರೂಣ ಮೃತಪಟ್ಟಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಹರ್ಷಿತಾ ಪತಿ ಚನ್ನಕೇಶವ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ.
ಇದಲ್ಲದೆ, ಶಾರದಮ್ಮ ಮತ್ತು ದಾಸೇಗೌಡರು ಲಿಂಗ ಪರೀಕ್ಷೆಗೆ ರೋಗಿಗಳನ್ನು ಕರೆತರುವ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದರೆಂಬ ಆರೋಪವೂ ಇದೆ. ಈ ಘಟನೆ ಹಿಂದೆ ಸಂಘಟಿತ ಜಾಲವಿರುವ ಸಾಧ್ಯತೆಯೂ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.



