ಹಾವೇರಿ:- ಆತ ಸತ್ತ ಅಂತ ಡಾಕ್ಟರ್ ಕೂಡ ಶವ ತೆಗೆದುಕೊಂಡು ಹೋಗಿ ಎಂದು ಕುಟುಂಬಸ್ಥರಿಗೆ ಹೇಳಿ ಕಳುಹಿಸಿದರು. ವ್ಯಕ್ತಿ ಸತ್ತ ಸುದ್ದಿ ಕೇಳಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಅದರಲ್ಲೂ ಆ ವ್ಯಕ್ತಿಯ ಪತ್ನಿಯ ಗೋಳಾಟ ಮಾತ್ರ ಹೇಳತ್ತೀರದ್ದಾಗಿತ್ತು. ಬಳಿಕ ಅಚ್ಚರಿ ಘಟನೆ ಒಂದು ನಡೆದಿತ್ತು. ಹೆಂಡತಿ ಕೂಗಿಗೆ ಸತ್ತವ ಉಸಿರಾಡಿದ. ಕೂಡಲೇ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇದೀಗ ವಿಧಿಯಾಟ ಎಂಬಂತೆ ಆತ ಕೊನೆಗೂ ತನ್ನ ಉಸಿರು ನಿಲ್ಲಿಸಿದ್ದಾನೆ.
ಹೌದು, ಸತ್ತನೆಂದು ಆಸ್ಪತ್ರೆಯಿಂದ ಊರಿಗೆ ಕರೆತರುವಾಗ ಬದುಕಿದ್ದ ವ್ಯಕ್ತಿ, ವಾರದ ನಂತರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ನಡೆದಿದೆ.
45 ವರ್ಷದ ಬಿಷ್ಟಪ್ಪ ಅಶೋಕ್ ಗುಡಿಮನಿ ಮೃತ ವ್ಯಕ್ತಿ. ಕಳೆದ 15 ದಿನಗಳ ಹಿಂದೆ ಕಾಮಾಲೆ ರೋಗದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ನೀಡಿದ ವೈದ್ಯರು ಸಾವನ್ನಪ್ಪಿದ್ದಾರೆ, ಊರಿಗೆ ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದರು. ಊರಿಗೆ ವಾಪಸ್ ಬರುತ್ತಿದ್ದ ವೇಳೆ, ಅವರ ಇಷ್ಟವಾದ ಡಾಬಾದ ಬಳಿ, ಡಾಬಾ ಬಂತು ನೋಡು ಊಟ ಮಾಡುತ್ತೀಯಾ ಎಂದು ಗೋಳಾಡಿ ಪತ್ನಿ ಕಣ್ಣೀರಿಟ್ಟಾಗ ಮೃತಪಟ್ಟ ವ್ಯಕ್ತಿ ಉಸಿರು ಬಿಟ್ಟಿದ್ದರು.
ಕೂಡಲೇ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ನಿರಂತರವಾಗಿ ಒಂದು ವಾರ ಕಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ. ಸ್ವಗ್ರಾಮ ಬಂಕಾಪುರದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ.