ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ದೇವರು, ಧರ್ಮ, ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ, ಮೌಲ್ಯಗಳನ್ನು ವಿಶ್ವಕ್ಕೆ ಹೇಳಿಕೊಟ್ಟ ದೇಶ ನಮ್ಮದಾಗಿದ್ದು, ಏನೆಲ್ಲ ಪ್ರಗತಿ ಸಾಧಿಸಿದ್ದರೂ ಈ ಮಾರ್ಗದಲ್ಲಿಯೇ ಮುನ್ನಡೆಯುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಬೆಳ್ಳಟ್ಟಿಯ ರಾಮಲಿಂಗೇಶ್ವರಮಠದ ಶ್ರೀ ಬಸವರಾಜ ಮಹಾಸ್ವಾಮಿಗಳು ನುಡಿದರು.
ಅವರು ಪಟ್ಟಣದಲ್ಲಿ ಸೋಮವಾರ ದಸರಾ ಉತ್ಸವ ಸಮಿತಿ ವತಿಯಿಂದ 4ನೇ ವರ್ಷದ ದುರ್ಗಾದೌಡ ಸ್ಥಾಪನಾ ಸಮಾರೋಪ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಪ್ರಭಾವದಿಂದ ಯುವಶಕ್ತಿ ದುಶ್ಚಟಗಳ ದಾಸರಾಗಿ ನಮ್ಮತನವನ್ನು ಮರೆಯುತ್ತಿದ್ದಾರೆ. ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕವಷ್ಟೇ ಅಲ್ಲದೆ, ಜನರನ್ನು ಧರ್ಮ ಮಾರ್ಗದಲ್ಲಿ ಸಾಗಿಸುತ್ತವೆ. ದೇವರ ಬಗ್ಗೆ ಎಲ್ಲರಲ್ಲೂ ನಂಬಿಕೆ, ವಿಶ್ವಾಸ ಬೇಕು. ದೇವಸ್ಥಾನಗಳಲ್ಲಿ ಪಾವಿತ್ರತೆ ಕಾಪಾಡಿ ನಿತ್ಯ ಪೂಜೆ, ಪ್ರಾರ್ಥನೆ ನಡೆಯಬೇಕು. ದುರ್ಗಾದೌಡ ಧರ್ಮ ಜಾಗೃತಿಯ ಹಬ್ಬವಾಗಿದ್ದು, ಅದನ್ನು ಭಕ್ತಿಯಿಂದ ಆಚರಿಸಿದಾಗ ಸತ್ಫಲ, ಬದುಕಿನಲ್ಲಿ ನೆಮ್ಮದಿ, ಶಾಂತಿ ಪ್ರಾಪ್ತವಾಗುತ್ತದೆ. ಧಾರ್ಮಿಕ ಚಿಂತಕ ಗುರುನಾಥ ದಾನಪ್ಪನವರ ಅವರು ಪ್ರತಿವರ್ಷ ಇಂತಹ ಧಾರ್ಮಿಕ ಕಾರ್ಯವನ್ನು ಆಚರಿಸಿಕೊಂಡು ಬರುತ್ತಿರುವದು ನಾಡಿಗೆ ಒಳ್ಳೆಯ ಸಂದೇಶವಿದ್ದಂತೆ ಎಂದು ನುಡಿದರು.
ದಸರಾ ಉತ್ಸವ ಸಮಿತಿ ಮುಖ್ಯಸ್ಥ ಹಾಗೂ ದುರ್ಗಾದೌಡ ಕಾರ್ಯಕ್ರಮದ ಯಶಸ್ವಿಯ ರೂವಾರಿ ಗುರುನಾಥ ದಾನಪ್ಪನವರ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಧಾರ್ಮಿಕ ಮೌಲ್ಯ ಹೆಚ್ಚಿಸುವ, ಧರ್ಮ ಜಾಗೃತಿ, ಧಾರ್ಮಿಕ ಕಲ್ಪನೆಗಳು ಉಳಿಯಬೇಕು ಎನ್ನುವ ಉದ್ದೇಶವು ಈ ದುರ್ಗಾದೌಡ ಕಾರ್ಯಕ್ರಮದ್ದಾಗಿದೆ. ಇದರಲ್ಲಿ ಎಲ್ಲರೂ ಸ್ವಯಂ ಪ್ರೇರಣೆಯಿಂದ, ಸಮಭಾವದಿಂದ ಪಾಲ್ಗೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ದಸರಾ ಉತ್ಸವ ಸಮಿತಿ ಅಧ್ಯಕ್ಷ ಮಲ್ಲನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಅರಳಿ, ಪುರಸಭೆ ಸದಸ್ಯರುಗಳಾದ ಪ್ರವೀಣ ಬಾಳಿಕಾಯಿ, ಅಶ್ವಿನಿ ಅಂಕಲಕೋಟಿ, ಪೂಜಾ ಖರಾಟೆ, ಶೋಭಾ ಮೆಣಸಿನಕಾಯಿ, ತಿಪ್ಪಣ್ಣ ಸಂಶಿ, ಗುರುರಾಜ ಪಾಟೀಲಕುಲಕರ್ಣಿ, ಬಸವೇಶ ಮಹಾಂತಶೆಟ್ಟರ, ಸಿದ್ದನಗೌಡ ಬಳ್ಳೊಳ್ಳಿ, ರಾಘವೇಂದ್ರ ಪೂಜಾರ, ಎಂ.ಎನ್. ಬಾಡಗಿ, ಗಂಗಾಧರ ಮೆಣಸಿನಕಾಯಿ ಸೇರಿದಂತೆ ಅನೇಕರಿದ್ದರು. ರಾಜು ಅರಳಿ ಪ್ರಾಸ್ತಾವಿಕ ನುಡಿದರು. ರವಿ ಲಿಂಗಶೆಟ್ಟಿ ನಿರೂಪಿಸಿದರು.