ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರದಲ್ಲಿ ನಡೆಯುವ ಹೋಳಿ ಮತ್ತು ರಂಜಾನ್ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ಶಾಂತಿ-ಸೌಹಾರ್ದತೆಯಿಂದ ಆಚರಿಸಬೇಕು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಡಿಎಸ್‌ಪಿ ಮಹಾಂತೇಶ ಸಜ್ಜನ ಹೇಳಿದರು.
ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹೋಳಿ/ರಂಜಾನ್ ಹಬ್ಬದ ಪ್ರಯುಕ್ತ ಕರೆಯಲಾಗಿದ್ದ ವಿವಿಧ ಸಮಾಜಗಳ ಮುಖಂಡರುಗಳನ್ನೊಳಗೊಂಡ ಶಾಂತಿ ಸಭೆಯಲ್ಲಿ ಮಾತನಾಡುತ್ತಿದ್ದರು.
ಹಬ್ಬಗಳು ನಾಡಿನ ಸಂಪ್ರದಾಯದ ಪ್ರತೀಕ. ಪರಸ್ಪರರಲ್ಲಿ ಸ್ನೇಹ, ಸೌಹಾರ್ದತೆ ಬೆಸೆಯುವ ಕೊಂಡಿಯಾಗಿವೆ. ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ಪಟ್ಟಣದಲ್ಲಿ ಹೋಳಿ ಮತ್ತು ರಂಜಾನ್ ಹಬ್ಬವನ್ನು ಸಹೋದರತ್ವ ಭಾವನೆಯಿಂದ ಶಾಂತಿಯುತ ಮತ್ತು ಅರ್ಥಪೂರ್ಣವಾಗಿ ಆಚರಿಸಿ. ಹಬ್ಬದ ಸಂದರ್ಭದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ರಾಸಾಯನಿಕಯುಕ್ತ ಬಣ್ಣ ಬಳಸಬಾರದು. ಅಹಿತಕರ ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹಿರಿಯರಾದ ಪಿ.ಬಿ. ಖರಾಟೆ ಮಾತನಾಡಿ, ಸ್ನೇಹ-ಸೌಹಾರ್ದತೆ ಮತ್ತು ಧಾರ್ಮಿಕ ಬಾಂಧವ್ಯ ವೃದ್ಧಿಸುವ ಪವಿತ್ರವಾದ ಹೋಳಿ ಮತ್ತು ರಂಜಾನ್ ಹಬ್ಬವನ್ನು ಎಲ್ಲರೂ ಸಹೋದರತೆಯ ಭಾವನೆಯಿಂದ ಆಚರಿಸೋಣ. ನಮ್ಮ ಪೂರ್ವಜರ ಕಾಲದಿಂದಲೂ ಆಚರಣೆಯಲ್ಲಿರುವ ಎಲ್ಲ ಹಬ್ಬಗಳಿಗೂ ಅರ್ಥಪೂರ್ಣವಾದ ಕಾರಣಗಳಿದ್ದು, ಅವುಗಳನ್ನು ಮುಂದಿನ ಸಮಾಜಕ್ಕೆ ಕೊಂಡೊಯ್ಯುವ ಜವಾಬ್ದಾರಿ ಎಲ್ಲರದ್ದಾಗಿದೆ ಎಂದರು.
ಗಂಗಾಧರ ಮೆಣಸಿನಕಾಯಿ ಮಾತನಾಡಿ, ಶಿಗ್ಲಿ ಕ್ರಾಸ್‌ನಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಿ ಮತ್ತು ಸಂಚಾರ ದಟ್ಟಣೆಯ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿದರೆ ಹೆಚ್ಚುತ್ತಿರುವ ಅಪಘಾತ, ಸಂಚಾರ ದಟ್ಟಣೆ ಸಮಸ್ಯೆಗಳು ಒಂದಿಷ್ಟಾದರೂ ಕಡಿಮೆಯಾಗುತ್ತವೆ ಎಂಬ ಸಲಹೆ ನೀಡಿದರು.
ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ಟಿ.ಕೆ. ರಾಠೋಡ ಮಾತನಾಡಿದರು. ಈ ಸಂದರ್ಭದಲ್ಲಿ ಸೋಮಣ್ಣ ಡಾಣಗಲ್, ದೀಪಕ ಲಮಾಣಿ, ಮಹೇಶ ಕಲಘಟಗಿ, ಬಿ.ಎಸ್. ಈಳಗೇರ, ನಾಗಯ್ಯ ಮಠಪತಿ, ಶೇಕಣ್ಣ ಕಾಳೆ, ಅಣ್ಣಪ್ಪ ರಾಮಗೇರಿ, ಅನುರಾಜ್ ಹಂಜಗಿ, ಶಿದ್ದಪ್ಪ ನೆನಗನಹಳ್ಳಿ, ಎನ್.ಆರ್. ಸಾತಪುತೆ, ಮಂಜುನಾಥ ಶೇರಸೂರಿ, ಸುರೇಶ ಹಟ್ಟಿ, ಶಿವಾನಂದ ಹೊಂಬಳ ಮುಂತಾದವರಿದ್ದರು.
ಮಾ.14ರಂದು ತಾಲೂಕಿನ ಗ್ರಾಮೀಣ ಭಾಗದಲ್ಲಿ, ಮಾ. 18ರಂದು ಲಕ್ಷ್ಮೇಶ್ವರ ಮತ್ತು ಶಿಗ್ಲಿಯಲ್ಲಿ ರಂಗಿನೋಕುಳಿ ಹಬ್ಬ ಆಚರಿಸಲಾಗುತ್ತಿದ್ದು, ಮಾ.31 ರಂದು ರಂಜಾನ್ ಹಬ್ಬದ ಆಚರಣೆಯಿದೆ.