ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮಕರ ಸಂಕ್ರಾಂತಿಯ ಹಿಂದಿನ ದಿನ ಬರುವ ಭೋಗಿ ಹಬ್ಬವನ್ನು ನರೇಗಲ್ಲ ಹೋಬಳಿಯಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಧನುರ್ಮಾಸದಲ್ಲಿ ಬರುವ ಭೋಗಿ ಹಬ್ಬ ವಿಶೇಷತೆಯಿಂದ ಕೂಡಿದೆ. ಸುಮಂಗಲೆಯರು ವೈದಿಕ ಮುತ್ತೈದೆಯರಿಗೆ ಮರದ ಬಾಗಿನ ನೀಡುವ ಮೂಲಕ ಹಬ್ಬವನ್ನು ಆಚರಿಸಿದರು. ಸೂರ್ಯ ದಕ್ಷಿಣಾಯನದಿಂದ ಉತ್ತರಾಯನದ ಕಡೆಗೆ ಚಲಿಸುವ ಮಹಾ ಪರ್ವವೇ ಸಂಕ್ರಮಣ ಎನಿಸಿಕೊಳ್ಳುತ್ತದೆ. ಮಕರ ಸಂಕ್ರಮಣದ ಮೊದಲ ಹಬ್ಬವೇ ಭೋಗಿ ಹಬ್ಬವಾಗಿದೆ.
ಮರದ ಬಾಗಿನ ನೀಡಿ ಬಂದ ನಂತರ ಮನೆಯಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ಹುಗ್ಗಿ, ಗೊಜ್ಜು, ಸೆಜ್ಜಿ ರೊಟ್ಟಿ, ಚಳ್ಳವರಿಕಾಯಿ ಪಲ್ಯ, ಬೆಣ್ಣೆ ಮುಂತಾದವುಗಳನ್ನು ದೇವರಿಗೆ ನೈವೇದ್ಯ ಮಾಡಿ ಮನೆ ಮಂದಿಯೆಲ್ಲ ಸೇರಿ ಊಟ ಮಾಡುತ್ತಾರೆ. ಧನುರ್ಮಾಸದಲ್ಲಿ ವಿಶೇಷವಾದ ಚಳಿ ಇರುತ್ತದೆ. ವಿಪರೀತವಾದ ಚಳಿಯನ್ನು ನಮ್ಮ ದೇಹವು ತಡೆದುಕೊಳ್ಳಲು ಬೇಕಾದ ಆಹಾರ ಪದ್ಧತಿಯನ್ನು ಇದರಲ್ಲಿ ಅಡಕಗೊಳಿಸಲಾಗಿದೆ. ಚಳಿಗಾಲದಲ್ಲಿ ಚರ್ಮ ಸುಕ್ಕುಗಟ್ಟಿ ಕೈಕಾಲುಗಳು ಒಡೆಯುವುದು ಸರ್ವೇಸಾಮಾನ್ಯ. ಇಂತಹ ಸಂದರ್ಭದಲ್ಲಿ ಎಣ್ಣೆ ಅಂಶಗಳಿರುವ ಪದಾರ್ಥಗಳನ್ನು ಸೇವಿಸಿ ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳುವಲ್ಲಿ ಎಳ್ಳು ಬಹಳಷ್ಟು ಸಹಾಯ ಮಾಡುತ್ತದೆ. ಅದಕ್ಕಾಗಿ ಎಳ್ಳಿನ ಪದಾರ್ಥಗಳನ್ನು ಈ ಸಮಯದಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ.



