ವಿಜಯಸಾಕ್ಷಿ ಸುದ್ದಿ, ಧಾರವಾಡ : ಸಮಾಜವು ಹೆಣ್ಣುಮಕ್ಕಳನ್ನು ಅನಿಷ್ಠ-ಕನಿಷ್ಠವೆಂದು ಪುರುಷರಿಗಿಂತ ಕೀಳಾಗಿ ನಡೆಸಿಕೊಳ್ಳುತ್ತಿದೆ. ಮೂಢನಂಬಿಕೆಯಿಂದಾಗಿ ಅಗೌರವಕ್ಕೆ ಒಳಪಡಿಸಿದ್ದರಿಂದ ಹೆಚ್ಚಿನ ಭ್ರೂಣ ಹತ್ಯೆಗಳು ನಡೆಯುತ್ತಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ಜಿಲ್ಲಾ ನ್ಯಾಯಾಧೀಶ ಪರಶುರಾಮ ಎಫ್.ದೊಡ್ಡಮನಿ ಹೇಳಿದರು.
ಅವರು ಬುಧವಾರ ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಆಯೋಜಿಸಲಾದ ಬೇಟಿ ಬಚಾವೋ-ಬೇಟಿ ಪಡಾವೋ ಯೋಜನೆಯಡಿಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಬಾಲ್ಯವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ, ಮಹಿಳಾ ಅನೈತಿಕ ಸಾಗಾಣಿಕೆ ಹಾಗೂ ಪಿಎನ್‌ಡಿಟಿ-ಆ್ಯಕ್ಟ್ 1994ರ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರನ್ನು ನಮ್ಮ ಭಾರತದ ಸಂಸ್ಕೃತಿಯಲ್ಲಿ ಗೌರವಿಸಿ, ನದಿ ಹಾಗೂ ಭೂಮಿತಾಯಿಗೆ ಹೋಲಿಸಲಾಗಿದೆ. ಸಮಾಜದಲ್ಲಿ ಯಾರನ್ನು ಗೌರವಿಸಬೇಕು, ಯಾರನ್ನು ಆದರ್ಶವಾಗಿರಿಸಿಕೊಳ್ಳಬೇಕೋ ಅವರನ್ನು ನಾವು ಮೂಲೆಗೆ ತಳ್ಳಿದ್ದೇವೆ. ಸುಳ್ಳುಗಳನ್ನು ಸೃಷ್ಟಿಸಿ ಅದಕ್ಕೆ ವೈಭವೀಕರಣ ಮಾಡಿ ಅದನ್ನೇ ವಿಜೃಂಭಿಸಿ ಜನರ ತಲೆಯೊಳಗೆ ಅವೈಜ್ಞಾನಿಕ, ಮೂಢನಂಬಿಕೆಗಳನ್ನು ತುಂಬಿ ಮಹಿಳೆಯರನ್ನು ಗೌರವ ಸ್ಥಾನದಿಂದ ದೂರವಿಡಲಾಗಿದೆ ಎಂದು ಹೇಳಿದರು.
ಜನರು ಗ್ರಹಣದ ಸಂದರ್ಭದಲ್ಲಿ ಹೆಚ್ಚಾಗಿ ಮೂಢನಂಬಿಕೆಗೆ ಒತ್ತು ಕೊಟ್ಟು, ಮನೆಯಲ್ಲಿ ನೀರು ಕುಡಿಯಬಾರದು, ಊಟ ಮಾಡಬಾರದು, ಮನೆಯ ಹೊರಗಡೆ ಹೋಗಬಾರದು, ಗ್ರಹಣದ ಸಂದರ್ಭದಲ್ಲಿ ಮನೆಯಲ್ಲಿರುವ ನೀರು ಚೆಲ್ಲುವುದು ಎಂಬ ಹಲವಾರು ಮೂಢನಂಬಿಕೆಗಳ ಜೊತೆ ವಾಸ್ತವದ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಇಂದಿನ ಯುಗದಲ್ಲಿ ಆಕಾಶಕ್ಕೆ ರಾಕೆಟ್ ಹಾರಿಸುತ್ತೇವೆ, ಮಂಗಳ ಗ್ರಹಕ್ಕೆ ಮಾನವನನ್ನು ಕಳಿಸುತ್ತಿದ್ದೇವೆ. ಹೀಗೆ ತಂತ್ರಜ್ಞಾನಗಳು ಮುಂದುವರೆದರು ಸಹ ಜನರಲ್ಲಿರುವ ಮೌಢ್ಯತೆಗಳು ಕಡಿಮೆಯಾಗಲು ಸಾದ್ಯವಾಗಿಲ್ಲ. ಮಹಿಳೆಯರು ಸಮಾಜದಲ್ಲಿ ನಡೆಯುವಂತಹ ಘಟನೆಗಳಿಗೆ ಕಿವಿಗೊಡದೆ ವೈಜ್ಞಾನಿಕವಾಗಿ ಚಿಂತಿಸಿ, ಜೀವನ ನಡೆಸುವುದು ಪ್ರಮುಖವಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಶಿ ಪಾಟೀಲ ಮಾತನಾಡಿ, ಹಳ್ಳಿಗಳಲ್ಲಿ ಬಾಲ್ಯ ವಿವಾಹವು ಹೆಚ್ಚಾಗಿ ಕಂಡು ಬರುತ್ತಿದೆ. ಒಂದು ಸಾವಿರ ಪುರುಷರಿಗೆ 937 ಹೆಣ್ಣು ಮಕ್ಕಳ ಸಂಖ್ಯೆ ಇದೆ. ಹಳ್ಳಿಗಳಲ್ಲಿ, ದೊಡ್ಡ ಆಸ್ಪತ್ರೆಗಳಲ್ಲಿ ಹೆಚ್ಚಾಗಿ ಹೆಣ್ಣು ಭ್ರೂಣ ಹತ್ಯೆ ಕಂಡುಬರುತ್ತಿದೆ. ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಹೆಣ್ಣು ಮಕ್ಕಳು ಸಮಾಜದಲ್ಲಿ ಉತ್ತಮವಾದ ಸ್ಥಾನಮಾನವನ್ನು ಹೊಂದಿ, ಗುರುತಿಸಿಕೊಳ್ಳಲು ಅವಕಾಶ ನೀಡಬೇಕು ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸ್ವರೂಪ ಟಿ.ಕೆ. ಕಾರ್ಯ್ರಮದ ಅಧ್ಯಕ್ಷತೆ ವಹಿಸಿದ್ದರು. ಹರೀಶ್ ಜೋಗಿ, ನೂರಜಹಾನ ಕಿಲ್ಲೇದಾರ, ತನುಜಾ ಕೆ.ಎನ್ ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಸಿದರು.
ಇತ್ತೀಚಿನ ದಿನಗಳಲ್ಲಿ ಹೆಚ್ಚು ಭ್ರೂಣಹತ್ಯೆ ಕಂಡುಬರುತ್ತಿದೆ. ಭ್ರೂಣಹತ್ಯೆ ಮಾಡುವುದು ಕೊಲೆಯ ಪ್ರಕರಣಕಿಂತ ಗಂಭೀರವಾದ ಅಪರಾಧವಾಗಿದೆ. ಬಸವಣ್ಣನವರು ಸಮಾಜದಲ್ಲಿ ನಡೆಯುತ್ತಿದ್ದ ಗಂಡು-ಹೆಣ್ಣು ಎಂಬ ಲಿಂಗ ತಾರತಮ್ಯದ ವಿರುದ್ಧ 900 ವರ್ಷಗಳ ಹಿಂದೆಯೇ ಸಮಾನತೆಗಾಗಿ ಶ್ರಮಿಸಿದರು. ಪ್ರತಿಯೊಬ್ಬರೂ ಬಸವಣ್ಣನವರ ಆದರ್ಶಗಳನ್ನು ಪಾಲಿಸಬೇಕು. ಮನೆಯಲ್ಲಿ ಮಕ್ಕಳಿಗೆ ಬಸವಣ್ಣನವರ ವಚನ ಮತ್ತು ಕತೆಗಳನ್ನು ಹೇಳಬೇಕು. ಆಗ ಮಾತ್ರ ವೈಜ್ಞಾನಿಕವಾಗಿ ಜೀವಿಸಲು ಸಾಧ್ಯ. ಭಾರತದಲ್ಲಿ ಮೊದಲ ಶಿಕ್ಷಕಿ ಸಾವಿತ್ರಿಭಾಯಿ ಪುಲೆ ಅವರು ಶಿಕ್ಷಣದಿಂದ ವಂಚಿತರಾದ ಹೆಣ್ಣು ಮಕ್ಕಳಿಗೆ ದೇವಾಲಯ, ಗುರುಕುಲ, ಮರದ ಕೆಳಗೆ ಶಿಕ್ಷಣ ನೀಡುತ್ತಿದ್ದರು. ಅವರ ಆದರ್ಶ ತತ್ವಗಳನ್ನು ಇಂದಿಗೂ ಮಹಿಳೆಯರು ಪಾಲಿಸಬೇಕು ಎಂದು ಪರಶುರಾಮ ಎಫ್.ದೊಡ್ಡಮನಿ ತಿಳಿಸಿದರು.