ರೈತರ ತಾಳ್ಮೆ ಪರೀಕ್ಷಿಸಿದರೆ ಉಗ್ರ ಹೋರಾಟ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕೇಂದ್ರ ಮತ್ತು ರಾಜ್ಯ ಸರಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳದೇ ಗೋವಿನಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪಿಸಬೇಕು. ರೈತರ ತಾಳ್ಮೆ ಪರೀಕ್ಷಿಸಿದರೆ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಸಮಗ್ರ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ ಮಾಗಡಿ ಎಚ್ಚರಿಸಿದರು.

Advertisement

ಸರ್ಕಾರ ಬೆಂಬಲ ಬೆಲೆಯ ಯೋಜನೆಯಡಿ ಗೋವಿನಜೋಳ ಖರೀದಿಸಬೇಕು ಎಂದು 6 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಗುರುವಾರ ಲಕ್ಷ್ಮೇಶ್ವರ ಬಂದ್ ಕರೆ ನೀಡಿದ್ದರು. ಈ ವೇಳೆ ರೈತರ ಬೃಹತ್ ಪ್ರತಿಭಟನಾ ರ‍್ಯಾಲಿ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಒಂದು ತಿಂಗಳಿಂದ ರೈತರು ಗೋವಿನಜೋಳ ಒಕ್ಕಲಿ ಮಾಡಿ ಸಂಗ್ರಹಿಸಿದ್ದಾರೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ 1600-1700 ರೂನಂತೆ ಮಾರಾಟವಾಗುತ್ತಿದೆ. 2400 ರೂ ಬೆಂಬಲ ಬೆಲೆ ಘೋಷಣೆಗೆ ಸೀಮಿತವಾಗಿದೆ. ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಕೂಡಲೇ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಹೂವಿನಶಿಗ್ಲಿಯ ಚನ್ನವೀರ ಶ್ರೀಗಳು, ಕುಂದಗೋಳ ಕಲ್ಯಾಣಪುರ ಮಠದ ಬಸವಣ್ಣಜ್ಜನವರು, ಅತ್ತಿಮತ್ತೂರಿನ ನಿಜಗುಣಶಿವಯೋಗಿಗಳು, ಮಳೆ ಮಲ್ಲಿಕಾರ್ಜುನ ಶಿವಾಚಾರ್ಯರು, ಜಮಖಂಡಿ ಶ್ರೀಗಳು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಉತ್ತರ ಕರ್ನಾಟಕ ಮಹಾಸಭಾ ರಾಜ್ಯಧ್ಯಕ್ಷ, ಕನ್ನಡಪರ ಸಂಘಟನೆಯ ಶರಣು ಗೋಡಿ, ಹೊನ್ನಪ್ಪ ವಡ್ಡರ ಮಾತನಾಡಿ, ರೈತರೆಲ್ಲ ಬೆಳೆ ಮಾರಾಟ ಮಾಡಿದ ಮೇಲೆ ಖರೀದಿ ಕೇಂದ್ರ ಪ್ರಾರಂಭವಾದರೆ ಅದು ಸ್ಮಶಾನ ಕೇಂದ್ರ ತೆರೆದಂತಾಗುತ್ತದೆ. ಸಂಕಷ್ಟದಲ್ಲಿರುವ ರೈತರಿಗೆ ಈಗಲಾದರೂ ಈ ಭಾಗದ ಸಂಸದರು, ಸಚಿವರು, ಶಾಸಕರು ರೈತರ ಹೋರಾಟಕ್ಕೆ ಬೆಂಬಲವಾಗಿ ನಿಂತು ಅವರಿಗೆ ನ್ಯಾಯ ಕೊಡಿಸಲು ಮುಂದಾಗಬೇಕು. ರೈತರ ಹೋರಾಟಕ್ಕೆ ಬೆದರಿಕೆಗಳು ಬರುತ್ತಿವೆ. ಈ ಹೋರಾಟ ಸ್ವಂತ, ಸ್ವಾರ್ಥದ ಹೋರಾಟವಲ್ಲ. ರೈತರ ಆಕ್ರೋಶದ ಕಟ್ಟೆಯೊಡೆದು ಉಂಟಾಗುವ ಅನಾಹುತಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಉತ್ತರ ಕೊಡಬೇಕಾಗುತ್ತದೆ. ಗೋವಿನ ಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಿದರೆ ಶಾಂತಿ, ಇಲ್ಲದಿದ್ದರೆ ಕ್ರಾಂತಿ ಎಂದು ಎಚ್ಚರಿಸಿದರು.

ಈ ವೇಳೆ ರೈತ ಮುಖಂಡರಾದ ಮಾಣಿಕಮ್ಮ ಚಿಲ್ಲೂರ, ಮಹೇಶ ಹೊಗೆಸೊಪ್ಪಿನ, ಪರಮೇಶ್ವರ ನಾಯ್ಕರ, ನಾಗರಾಜ ಚಿಂಚಲಿ, ವಿಜಯ ಕುಮಾರ ಮಹಾಂತಶೆಟ್ಟರ, ವಿಜಯ ಹತ್ತಿಕಾಳ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆ ರಾಜ್ಯಾಧ್ಯಕ್ಷ ಸುರೇಶ ಗೋಕಾಕ ಪರಮೇಶ್ವರ ನಾಯಕರ ಮಾತನಾಡಿದರು.

ರೈತ ಮುಖಂಡರಾದ ಎಂ.ಎಸ್. ದೊಡ್ಡಗೌಡರ, ಶಂಕ್ರಣ್ಣ ಕಾಳೆ, ನಿಂಬಣ್ಣ ಮಡಿವಾಳರ, ಈರಣ್ಣ ಪೂಜಾರ, ಟಾಕಪ್ಪ ಸಾತಪೂತೆ, ಬಸವರಾಜ ಸಾತಪೂತೆ, ಬಸವಣ್ಣೆಪ್ಪ ನಂದೆಣ್ಣವರ, ಎಂ.ಎ**.** ಗದಗ, ದಾದಾಪೀರ ಮುಚ್ಚಾಲೆ, ಸುಭಾಷ್ ಬಟಗುರ್ಕಿ, ಸುಭಾನ ಹೊಂಬಳ, ಪ್ರವೀಣ ಬಾಳಿಕಾಯಿ, ಶಂಕರ ಬ್ಯಾಡಗಿ, ಚನ್ನಪ್ಪ ಷಣ್ಮುಖಿ, ಪ್ರಕಾಶ ಕೊಂಚಿಗೇರಿಮಠ, ಭಾಗ್ಯಶ್ರೀ ಬಾಬಣ್ಣ, ಲೋಕೇಶ ಸುತಾತ, ಮುತ್ತಣ್ಣ ಗಡೆಪ್ಪನವರ, ಚಂದ್ರಗೌಡ ಕರಿಗೌಡ್ರ, ವಸಂತ ಕರಿಗೌಡ್ರ, ಭರಮಣ್ಣ ರೊಟ್ಟಿಗವಾಡ, ಸುರೇಶ ಹಟ್ಟಿ, ನಾಗೇಶ ಅಮರಾಪೂರ, ಈರಣ್ಣ ಪವಾಡದ, ಸೋಮಣ್ಣ ಡಾಣಗಲ್, ಬಸಣ್ಣ ಹಂಜಿ, ಪರಮೇಶಗೌಡ ಪಾಟೀಲ, ವಿಜಯ ಹತ್ತಿಕಾಳ, ಬಸವೇಶ ಮಹಾಂತಶೆಟ್ಟರ, ಗಿರೀಶ ಅಗಡಿ, ಬಸವರಾಜ ಹಿರೇಮನಿ ಸೇರಿದಂತೆ ಅನೇಕರಿದ್ದರು.

ಲಕ್ಷ್ಮೇಶ್ವರ ಬಂದ್ ಕರೆಯ ಹಿನ್ನೆಲೆ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಗದಗ ಎಸ್ಪಿ ರೋಹನ್ ಜಗದೀಶ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಬಿಜಾಪೂರದ ರಾಮನಗೌಡ್ರ ಹಟ್ಟಿ, ಡಿವೈಎಸ್‌ಪಿಗಳಾದ ಮುರ್ತುಜಾ ಖಾದ್ರಿ, ಪ್ರಭುಗೌಡ ಡಿ.ಕೆ, ಸಿಪಿಐ ಬಿ.ವಿ. ನೇಮಗೌಡ್ರ, ಪಿಎಸ್‌ಐ ನಾಗರಾಜ ಗಡಾದ, ಕ್ರೆಂ ವಿಭಾಗದ ಪಿಎಸ್‌ಐ ಟಿ.ಕೆ. ರಾಥೋಡ, ಸೇರಿದಂತೆ 5 ಸಿಪಿಐ, 8 ಪಿಎಸ್‌ಐ, 14 ಎಎಸ್‌ಐ, 3 ಕೆಎಸ್‌ಆರ್‌ಪಿ ತುಕಡಿ, 4 ಡಿಆರ್ ಸೇರಿ ಒಟ್ಟು 150ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಬಂದೋಬಸ್ತ್ ಕಾರ್ಯ ನಿರ್ವಹಿಸಿದರು.

 


Spread the love

LEAVE A REPLY

Please enter your comment!
Please enter your name here