ಮೈಸೂರು: ವಿಬಿಜಿ ಗ್ರಾಮ್ ಜಿ ಕಾಯ್ದೆಯನ್ನು ರದ್ದುಗೊಳಿಸಿ MNREGA ಯೋಜನೆಯನ್ನು ಪುನಃ ಜಾರಿಗೊಳಿಸುವವರೆಗೆ ಹೋರಾಟ ನಡೆಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಮೈಸೂರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಟಿ.ನರಸೀಪುರ ತಾಲ್ಲೂಕಿನ ಕುಪ್ಯಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವರುಣಾ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
2005ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ MNREGA ಕಾಯ್ದೆ ಜಾರಿಯಾಗಿದ್ದು, ಇದು ಜನರಿಗೆ ಕೆಲಸದ ಹಕ್ಕು ನೀಡಿದ ಐತಿಹಾಸಿಕ ಕಾಯ್ದೆಯಾಗಿದೆ. ಆದರೆ ಈಗ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ದುರ್ಬಲಗೊಳಿಸಿ ಬಡವರು, ಮಹಿಳೆಯರು ಹಾಗೂ ಕಾರ್ಮಿಕರಿಗೆ ಕೆಲಸ ಸಿಗದಂತೆ ಮಾಡುತ್ತಿದೆ ಎಂದು ಆರೋಪಿಸಿದರು. MNREGA ಬದಲಿಗೆ ವಿಬಿಜಿ ಗ್ರಾಮ್ ಜಿ ಎಂಬ ಹೊಸ ಕಾಯ್ದೆಯನ್ನು ತರಲಾಗಿದ್ದು, ಇದರಿಂದ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ವಿಬಿಜಿ ಗ್ರಾಮ್ ಜಿ ಕಾಯ್ದೆ ರದ್ದಾಗಬೇಕು. MNREGA ಮುಂದುವರಿಯಲೇಬೇಕು. ಇದಕ್ಕಾಗಿ ಜನ ಚಳುವಳಿಗೆ ಸಿದ್ಧರಾಗಬೇಕು ಎಂದು ಸಿಎಂ ಹೇಳಿದರು.
MNREGA ದಲಿತರು, ಮಹಿಳೆಯರು ಹಾಗೂ ಕಾರ್ಮಿಕರಿಗೆ ಉದ್ಯೋಗ ನೀಡುವ ಸಂವಿಧಾನಾತ್ಮಕ ಹಕ್ಕು. ಈ ಹಕ್ಕನ್ನು ಯಾವುದೇ ಕಾರಣಕ್ಕೂ ಕಿತ್ತುಕೊಳ್ಳಬಾರದು ಎಂದು ಒತ್ತಾಯಿಸಿದರು.



