ಆನೇಕಲ್: ಕಾರು ಖರೀದಿ ವಿಚಾರವಾಗಿ ಉಂಟಾದ ಗಲಾಟೆಯಿಂದ ಬಾಮೈದನೇ ಭಾವನನ್ನು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಇಂದೂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮೇಳ್ಯ ಪ್ರದೇಶದಲ್ಲಿ ನಡೆದಿದೆ.
ವಿನಯ್ ಕುಮಾರ್ (37) ಕೊಲೆಯಾದ ವ್ಯಕ್ತಿ. ಪ್ರಕರಣ ಸಂಬಂಧ ರಾಜು, ವೇಣು ಹಾಗೂ ಶ್ರೇಯಸ್ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಇಂದೂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರ ನಿವಾಸಿಯಾದ ವಿನಯ್ ಕುಮಾರ್, 10 ತಿಂಗಳ ಹಿಂದೆ ಮೇಘನಾರೊಂದಿಗೆ ಮದುವೆಯಾಗಿದ್ದರು. ಮದುವೆಯ ನಂತರ ದಂಪತಿಗಳ ನಡುವೆ ಕಲಹ ಆರಂಭವಾಗಿತ್ತು.
ಇತ್ತೀಚಿಗೆ ಕಾರು ಖರೀದಿ ವಿಚಾರವಾಗಿ ಗಲಾಟೆ ಹೆಚ್ಚಾಗಿತ್ತು. ಕಾರು ಖರೀದಿಗೆ ನನ್ನ ಅಣ್ಣ ರಾಜು ಹಣ ಕೊಡುತ್ತಾನೆ ತೆಗೆದುಕೊಂಡು ಬಾ ಎಂದು ಮೇಘನಾ ಹೇಳಿದ್ದಾರೆ. ಈ ಹಿನ್ನೆಲೆ ಶನಿವಾರ ರಾತ್ರಿ 9ಗಂಟೆಗೆ ಆಂಧ್ರದ ಮೇಳ್ಯ ಬಳಿ ವಿನಯ್ ಹೋಗಿದ್ದಾರೆ. ಈ ವೇಳೆ ಹಣಕಾಸಿನ ವಿಚಾರವಾಗಿ ಬಾಮೈದ ರಾಜು ಮತ್ತು ಅವನ ಗ್ಯಾಂಗ್ನಿಂದ ವಿನಯ್ ತಲೆಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಆತನನ್ನು ಸೇರಿ ಬೈಕ್ ಸಮೇತ ಕಾಲುವೆಗೆ ಎಸೆದಿದ್ದಾರೆ.
ಬೈಕ್ನ ಜಿಪಿಎಸ್ ಮಾಹಿತಿ ಆಧರಿಸಿ ಘಟನೆ ಬೆಳಕಿಗೆ ಬಂದಿದ್ದು, ನಂತರ ವಿನಯ್ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಅಂತ್ಯಕ್ರಿಯೆ ಅನಂತಪುರ ಜಿಲ್ಲೆಯ ಅಪ್ಪೆಹಳ್ಳಿ ಗ್ರಾಮದಲ್ಲಿ ನಡೆಯಲಿದೆ.



