ಬೆಂಗಳೂರು: ಬಸವೇಶ್ವರನಗರದ ಹೋಟೆಲ್‌ನಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಬಸವೇಶ್ವರ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮಂಜುನಾಥ್ ಹಾಗೂ ಭಾಗ್ಯರಾಜ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಸೇರಿ ಶಶಿಕುಮಾರ್ ಎಂಬ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಮಾರ್ಚ್ 2ರ ರಾತ್ರಿ ಹೋಟೆಲ್‌ನಲ್ಲಿ ಶಶಿಕುಮಾರ್ ಹಾಗೂ ಮಂಜುನಾಥ್ ನಡುವೆ ಕಾಲು ತಾಕಿದ ವಿಚಾರಕ್ಕೆ ಜಗಳ ಉಂಟಾಗಿದೆ. ಈ ವೇಳೆ ಕೋಪಗೊಂಡ ಮಂಜುನಾಥ್ ತನ್ನ ಮನೆಯಿಂದ ತಮ್ಮ ಭಾಗ್ಯರಾಜ್ ಅನ್ನು ಕರೆಸಿಕೊಂಡಿದ್ದಾನೆ.
ಘಟನೆ ಸ್ಥಳಕ್ಕೆ ಬಂದ ಭಾಗ್ಯರಾಜ್ ಕೋಪದಲ್ಲಿ ಚಾಕು ಹಿಡಿದು ಬಂದು, ಏಕಾಏಕಿ ಶಶಿಕುಮಾರ್ ಕತ್ತಿಗೆ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಗಂಭೀರ ಗಾಯಗೊಂಡ ಶಶಿಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ಬಳಿಕ ಇಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದರು. ಆದರೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.



