ದಾವಣಗೆರೆ: ಮನೆ ಕಟ್ಟುವ ವಿಚಾರಕ್ಕೆ ಎರಡು ಕುಟುಂಬದ ನಡುವೆ ಮಾರಾಮಾರಿ ನಡೆದಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ದೇವಿಕೆರೆ ಗ್ರಾಮದಲ್ಲಿ ನಡೆದಿದೆ. ಪ್ರತಿಭಾ ಮತ್ತು ಮಲ್ಲಿಕಾರ್ಜುನ್ ಗಾಯಗೊಂಡವರಾಗಿದ್ದು,
ವೀರೇಶ್, ಗುರುಸಿದ್ದಪ್ಪ ಹಾಗೂ ಶರಣಪ್ಪ ಹಲ್ಲೆ ಮಾಡಿದ ವ್ಯಕ್ತಿಗಳಾಗಿದ್ದಾರೆ. ಪ್ರತಿಭಾ ಮತ್ತು ಮಲ್ಲಿಕಾರ್ಜುನ್ ಎಂಬುವವರು ಖಾಲಿ ಜಾಗದಲ್ಲಿ ಮನೆ ಕಟ್ಟುತ್ತಿದ್ದರು. ಈ ಜಾಗ ತಮ್ಮದಾಗಿದೆ ಎಂದು ಆರೋಪಿಸಿದ ವೀರೇಶ್, ಗುರುಸಿದ್ದಪ್ಪ ಮತ್ತು ಶರಣಪ್ಪ ಮನೆ ಕಟ್ಟಲು ಅಡ್ಡಿ ಮಾಡಿದ್ದಾರೆ.
ಇಂದು ಪಿಡಿಒ ಸಮ್ಮುಖದಲ್ಲಿ ಅಳತೆ ಮಾಡಲು ಹೋದಾಗ ಎರಡು ಕುಟುಂಬದ ನಡುವೆ ವಾಗ್ವಾದ ಉಂಟಾಗಿ ಮಾರಾಮಾರಿ ನಡೆದಿದೆ. ಘಟನೆಯಿಂದಾಗಿ ಗಾಯಗೊಂಡ ಪ್ರತಿಭಾ ಮತ್ತು ಮಲ್ಲಿಕಾರ್ಜುನ್ ಅವರನ್ನು ಜಗಳೂರು ತಾಲ್ಲೂಕು ಆಸ್ಪತ್ರೆ ದಾಖಲಿಸಲಾಗಿದ್ದು, ಈ ಘಟನೆ ಸಂಬಂಧ ಬಿಳಚೋಡು ಪೊಲೀಸ್ ಠಾಣೆಯಲ್ಲಿ ಎರಡು ಕಡೆಯಿಂದ ದೂರು ದಾಖಲಾಗಿದೆ.