ವಿಜಯಸಾಕ್ಷಿ ಸುದ್ದಿ, ಗದಗ: ವ್ಯವಸ್ಥಿತ ಆರ್ಥಿಕ ನಿರ್ವಹಣೆ, ಉಳಿತಾಯ ಮತ್ತು ಹೂಡಿಕೆಗಳ ಮೂಲಕ ಆರ್ಥಿಕ ಸಬಲತೆಯನ್ನು ಹೊಂದಬಹುದು. ದೈಹಿಕ, ಮಾನಸಿಕ ಸ್ವಾಸ್ಥ್ಯದೊಂದಿಗೆ ಆರ್ಥಿಕ ಸ್ವಾಸ್ಥ್ಯವೂ ಅತಿಮುಖ್ಯವೆಂದು ಸೆಬಿ ಪ್ರಮಾಣಿತ ತರಬೇತುದಾರ ಮತ್ತು ಸಂವಹನ ತಜ್ಞ ಪ್ರಶಾಂತ ಮೊಟಗಿ ಹೇಳಿದರು.
ಅವರು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗ, ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಉದ್ಯೋಗ ಮಾಹಿತಿ ಕೋಶಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ‘ಆರ್ಥಿಕ ಸ್ವಾಸ್ಥ್ಯ ಮತ್ತು ಆನ್‌ಲೈನ್ ವಂಚನೆಗಳು’ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಸುಧಾ ಕೌಜಗೇರಿ ಮಾತನಾಡಿ, ತಾಂತ್ರಿಕ ವಿಷಯಗಳೊಂದಿಗೆ ಮೌಲ್ಯಾಧಾರಿತ ಜೀವನದ ಕುರಿತು ತಿಳಿಸಿದ ಸಂಪನ್ಮೂಲ ವ್ಯಕ್ತಿಗಳನ್ನು ಶ್ಲಾಘಿಸುತ್ತ, ಮಾರುಕಟ್ಟೆ ಮತ್ತು ಹೂಡಿಕೆಯ ಮಾರ್ಗಗಳ ಕುರಿತು ಜಾಗೃತಿ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಪ್ರೊ. ಲಕ್ಷ್ಮಣ ಮುಳಗುಂದ ಪ್ರಾಸ್ತಾವಿಕವಾಗಿ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆ, ಆರ್ಥಿಕತೆಗಳ ಕುರಿತು ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳು ಅರಿವು ಹೆಚ್ಚಿಸಿಕೊಳ್ಳಬೇಕೆಂದು ಹೇಳಿದರು.
ಇತಿಹಾಸ ಪ್ರಾಧ್ಯಾಪಕ ಮತ್ತು ಎನ್.ಎಸ್.ಎಸ್ ಘಟಕದ ಸಂಯೋಜಕ ಪ್ರೊ. ಅಪ್ಪಣ್ಣ ಹಂಜೆ, ಐಕ್ಯೂಎಸಿ ಸಂಚಾಲಕ ಡಾ. ಜಿತೇಂದ್ರ ಜಹಾಗೀರದಾರ, ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಎಸ್.ಕೆ. ಆಲೂರ, ಎಸ್.ಬಿ. ಚಿಕ್ಕೇನಕೊಪ್ಪ, ಚಂದ್ರಪ್ಪ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉದ್ಯೋಗ ಮಾಹಿತಿ ಕೋಶದ ಸಂಚಾಲಕ ಡಾ. ಶ್ರೀಶವಿಠ್ಠಲ ಸ್ವಾಗತಿಸಿ ವಂದಿಸಿದರು.