ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಜನರಲ್ಲಿ ಭಕ್ತಿಯೊಂದಿಗೆ ಮಾನಸಿಕ ನೆಮ್ಮದಿ ನೆಲೆಸಲು ಮತ್ತು ಗ್ರಾಮದ ಸುರಕ್ಷತೆಯ ದೃಷ್ಟಿಯಿಂದ ಗ್ರಾಮದ ದುರ್ಗಾದೇವಿ ದೇವಸ್ಥಾನ ಸಹಕಾರಿಯಾಗಿದೆ ಎಂದು ರೋಣ ಶಾಸಕ, ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.
ಸಮೀಪದ ತೋಟಗಂಟಿ ಗ್ರಾಮದ ಶ್ರೀ ದುರ್ಗಾಮಾತೆಯ ನೂತನ ದೇವಸ್ಥಾನ ಉದ್ಘಾಟಿಸಿ ಅವರು ಮಾತನಾಡಿದರು.
ಅನಾದಿ ಕಾಲದಿಂದಲೂ ಪೂರ್ವಜರು ನಮಗೆ ದಾರಿದೀಪವಾಗಿದ್ದಾರೆ. ಅವರಂತೆ ಈಗಿನ ಯುವಪೀಳಿಗೆ ನಡೆದುಕೊಂಡು ಹೋಗಬೇಕು. ಎಲ್ಲಿ ದೇವಾಲಯಗಳು ಇರುತ್ತವೆಯೋ ಅಲ್ಲಿ ಶಾಂತಿ, ನೆಮ್ಮದಿ, ಸುರಕ್ಷೆಗಳಿರುತ್ತವೆ. ವಿಶೇಷವಾಗಿ ದುರ್ಗಾದೇವಿಯು ನಮ್ಮ ಸುತ್ತಮುತ್ತಲಿನ ದುಷ್ಟಶಕ್ತಿಗಳನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದ್ದಾಳೆ. ಆದ್ದರಿಂದ ಗ್ರಾಮಸ್ಥರು ದೇವಿಯ ಆರಾಧನೆ ಮತ್ತು ಪೂಜಾ ಕಾರ್ಯಕ್ರಮಗಳಲ್ಲಿ ಆಸಕ್ತಿಗಳಿಂದ ಪಾಲ್ಗೊಳ್ಳಬೇಕು ಎಂದರು.
ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರತಿಯೊಂದು ಗ್ರಾಮಗಳಲ್ಲಿ ದುರ್ಗಾದೇವಿ ದೇವಸ್ಥಾನ ಜಾಗೃತ ಸ್ಥಳವಾಗಿರುತ್ತವೆ. ದುರ್ಗಾದೇವಿಯ ಶಕ್ತಿ ಅಪಾರವಾಗಿದ್ದು, ತೋಟಗಂಟಿ ಚಿಕ್ಕ ಗ್ರಾಮವಾದರೂ ಗ್ರಾಮಸ್ಥರ ಸಹಕಾರದಿಂದ ದೇವಸ್ಥಾನ ನಿರ್ಮಿಸಿ ಆಧ್ಯಾತ್ಮ, ಭಕ್ತಿ ಪರಂಪರೆಯನ್ನ ಮುಂದುವರೆಸಿಕೊಂಡು ಹೋಗುತ್ತಿರುವ ಕಾರ್ಯಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.
ಕುಕನೂರ-ಇಟಗಿಯ ಮರುಳಸಿದ್ದೇಶ್ವರ ಪುಣ್ಯಾಶ್ರಮದ ಶಿವಶರಣ ಗದಿಗೆಪ್ಪಜ್ಜ ಸಮ್ಮುಖ ವಹಿಸಿದ್ದರು. ಪ.ಪಂ ಸ್ಥಾಯಿ ಕಮಿಟಿ ಚೇರಮನ್ ಮುತ್ತಪ್ಪ ನೂಲ್ಕಿ ಅಧ್ಯಕ್ಷತೆ ವಹಿಸಿದ್ದರು. ಡಾ. ಬಿ.ಎನ್. ಪಾಟೀಲ, ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಪ.ಪಂ ಸದಸ್ಯ ಈರಪ್ಪ ಜೋಗಿ, ಆರ್. ಮಲ್ಲನಗೌಡ್ರ, ನಿವೃತ್ತ ಶಿಕ್ಷಕ ಅಶೋಕ ಗಿರಡ್ಡಿ, ಪಿಎಸ್‌ಐ ಐಶ್ವರ್ಯ ನಾಗರಾಳ, ಮೈಲಾರಪ್ಪ ಚಳ್ಳಮರದ ಮುಂತಾದವರಿದ್ದರು.



