ಹುಬ್ಬಳ್ಳಿ: ಬಸ್ ನಿಲ್ದಾಣಗಳು ಹಾಗೂ ಬಸ್‌ಗಳಲ್ಲಿ ಗುಟ್ಕಾ, ತಂಬಾಕು ಉತ್ಪನ್ನಗಳು ಮತ್ತು ಪಾನ್ ಬೀಡಾ ಜಗಿದು ಉಗುಳುವ ಪ್ರವೃತ್ತಿಗೆ ಕಡಿವಾಣ ಹಾಕಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಪ್ರಯಾಣಿಕರಷ್ಟೇ ಅಲ್ಲದೆ, ಕರ್ತವ್ಯದ ವೇಳೆ ತಂಬಾಕು ಉತ್ಪನ್ನಗಳನ್ನು ಬಳಸಿ ಉಗುಳುವ ಚಾಲಕರು ಮತ್ತು ನಿರ್ವಾಹಕರಿಗೂ ದಂಡ ವಿಧಿಸಲಾಗುತ್ತದೆ.
ಬಸ್ ನಿಲ್ದಾಣ ಹಾಗೂ ಸಂಸ್ಥೆಯ ಬಸ್‌ಗಳಲ್ಲಿ ಉಗುಳುವುದರಿಂದ ಸ್ವಚ್ಛತೆಗೆ ಧಕ್ಕೆಯಾಗುತ್ತಿದೆ ಎಂಬ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದುವರೆಗೆ ಪ್ರಯಾಣಿಕರು ಮತ್ತು ಸಾರ್ವಜನಿಕರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗುತ್ತಿತ್ತು. ಇದೀಗ ಸಂಸ್ಥೆಯ ಸಿಬ್ಬಂದಿಯನ್ನೂ ನಿಯಮದ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ.
ಈ ಕುರಿತು ಕರಡು ಅಧಿಸೂಚನೆ ಬಹುತೇಕ ಸಿದ್ಧವಾಗಿದ್ದು, ಭದ್ರತಾ ಸಿಬ್ಬಂದಿ ಹಾಗೂ ಸಂಸ್ಥೆಯ ಅಧಿಕಾರಿಗಳು ನಿಯಮ ಉಲ್ಲಂಘಿಸುವ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ದಂಡ ವಿಧಿಸಲಿದ್ದಾರೆ. ಮರು ಉಲ್ಲಂಘನೆ ಮಾಡಿದವರ ವಿರುದ್ಧ ಹೆಚ್ಚುವರಿ ದಂಡ ಹಾಗೂ ಶಿಸ್ತು ಕ್ರಮ ಜಾರಿಗೊಳಿಸುವ ಬಗ್ಗೆ ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎನ್‌ಡಬ್ಲ್ಯೂಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಂಗಾ ಎಂ. ತಿಳಿಸಿದ್ದಾರೆ.
ಸಂಸ್ಥೆಯ ವ್ಯಾಪ್ತಿಯ ಎಲ್ಲ ಚಾಲಕರು ಮತ್ತು ನಿರ್ವಾಹಕರಿಗೂ ಈ ನಿಯಮ ಅನ್ವಯವಾಗಲಿದೆ. ಮೊದಲ ಬಾರಿಗೆ ತಂಬಾಕು ಉತ್ಪನ್ನ ಬಳಸಿ ಉಗುಳುವ ಸಿಬ್ಬಂದಿಗೆ ₹200 ದಂಡ ವಿಧಿಸಲಾಗುತ್ತದೆ. ಮರು ಉಲ್ಲಂಘನೆ ಮಾಡಿದರೆ ಹೆಚ್ಚಿನ ದಂಡದ ಜೊತೆಗೆ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಇನ್ನು ಬಸ್ ನಿಲ್ದಾಣ ಅಥವಾ ಬಸ್‌ನಲ್ಲಿ ತಂಬಾಕು ಉತ್ಪನ್ನಗಳನ್ನು ಜಗಿದು ಉಗುಳುವ ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ₹100 ದಂಡ ವಿಧಿಸಲಾಗುತ್ತದೆ. ಬಸ್ ನಿಲ್ದಾಣ ನಿಯಂತ್ರಕರು, ಭದ್ರತಾ ಸಿಬ್ಬಂದಿ ಹಾಗೂ ಸಂಸ್ಥೆಯ ಅಧಿಕಾರಿಗಳಿಗೆ ದಂಡ ವಿಧಿಸುವ ಅಧಿಕಾರ ನೀಡಲಾಗುತ್ತದೆ.



