ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಭಾನುವಾರ ಮುಂಜಾನೆಯೇ ಪೊಲೀಸರು ನಂಬರ್ ಪ್ಲೇಟ್ ಇಲ್ಲದ ಹಾಗೂ ದೋಷಪೂರಿತ ನಂಬರ್ ಪ್ಲೇಟ್ ಹೊಂದಿದ ವಾಹನ ಚಲಾಯಿಸುತ್ತಿದ್ದ ವಾಹನ ಸವಾರರಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದರು. 50ಕ್ಕೂ ಅಧಿಕ ಬೈಕ್‌ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದರಲ್ಲದೇ ಕೂಡಲೇ ನಂಬರ್ ಪ್ಲೇಟ್ ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ನಿರ್ದೇಶನದಲ್ಲಿ ಶಿರಹಟ್ಟಿ ವೃತ್ತದ ಸಿಪಿಐ ನಾಗರಾಜ ಮಾಡಳ್ಳಿ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ನಾಗರಾಜ ಗಡಾದ, ಕ್ರೈಂ ವಿಭಾಗದ ಪಿಎಸ್‌ಐ ಟಿ.ಕೆ. ರಾಠೋಡ ಅವರ ನೇತೃತ್ವದಲ್ಲಿ ತಂಡ ರಚಿಸಿ, ಇಲಾಖೆಯ ಸಿಬ್ಬಂದಿಗಳು ಹಾಗೂ ಹೋಮ್ ಗಾರ್ಡ್ಗಳ ಸಹಕಾರದಲ್ಲಿ ಕಾರ್ಯಾಚರಣೆ ನಡೆಸಿ ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ ದಂಡವನ್ನು ಕಟ್ಟಿಸಿ ಕ್ರಮ ಕೈಗೊಂಡರು.
ಪಟ್ಟಣದ ಎರಡು ಪ್ರಮುಖ ಜಾಗೆಗಳಲ್ಲಿ ಜಿಲ್ಲಾ ಪೋಲಿಸ್ ಇಲಾಖೆಯಿಂದ ಥರ್ಡ್-ಐ ಸಿ.ಸಿ ಕ್ಯಾಮರಾಗಳನ್ನು ಹಾಕಲಾಗಿದ್ದು, ಹೆಲ್ಮೆಟ್ ಇಲ್ಲದೆ, ಸೀಟ್ ಬೆಲ್ಟ್ ಹಾಕದ ವಾಹನ ಸವಾರರು ಥರ್ಡ್- ಐ ಕ್ಯಾಮರಾದಲ್ಲಿ ಸೆರೆಯಾಗಿ ದಂಡ ಕಟ್ಟುತ್ತಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನದ ಥರ್ಡ್ ಐ ಬಳಕೆ ಮಾಡಿರುವದರಿಂದ, ನಂಬರ್ ಮೂಲಕವೇ ಅವರಿಗೆ ದಂಡ ವಿಧಿಸುತ್ತಿದ್ದಾರೆ. ಆದರೆ, ಇದೀಗ ಥರ್ಡ್ ಐಗೆ ಚಳ್ಳೆಹಣ್ಣು ತಿನ್ನಿಸುವ ನಿಟ್ಟಿನಲ್ಲಿ ನಂಬರ್ ಪ್ಲೇಟ್‌ನಲ್ಲಿ ಯಾವುದಾದರು ಒಂದು ನಂಬರ್‌ಗೆ ಕಪ್ಪು ಟೇಪ್ ಹಚ್ಚಿ ಅದು ಕಾಣದಂತೆ ಮಾಡುತ್ತಿರುವದು ಇಲಾಖೆಯ ಗಮನಕ್ಕೆ ಬಂದಿದ್ದು, ಈ ನಿಟ್ಟಿನಲ್ಲಿ ಇಲಾಖೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಮುಂದಿನ ದಿನಗಳಲ್ಲಿ ನೋಂದಣಿ ಸಂಖ್ಯೆ ಇಲ್ಲದ, ತಪ್ಪು ನಂಬರ್ ಪ್ಲೇಟ್ ಹಾಗೂ ನಂಬರ್ ಮರೆಮಾಚುವ ಸ್ಟಿಕರ್ ಅಂಟಿಸಿರುವದು ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು, ಅಭಿಯಾನದಿಂದ ಜನರಲ್ಲಿ ಸಂಚಾರ ಸುಗಮ ವ್ಯವಸ್ಥೆ ಬಗ್ಗೆ ತಿಳುವಳಿಕೆ ಮೂಡಿಸಲಾಗುವುದು ಎಂದು ಸಿಪಿಐ ನಾಗರಾಜ ಮಾಡಳ್ಳಿ ಹಾಗೂ ಪಿಎಸ್‌ಐ ನಾಗರಾಜ ಗಡಾದ ಹೇಳಿದರು.